ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ‘ಮೇಕ್ ಇನ್ ಇಂಡಿಯಾ’ ಯೋಜನೆಯನ್ನು ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿರುವುದಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ವಾಸ್ತವವನ್ನು ಒಪ್ಪಿಕೊಳ್ಳಬೇಕಾಗಿದೆ ಎಂದು ಕಿಡಿಕಾರಿದ್ದಾರೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ದೇಶದಲ್ಲಿ ಫಾಕ್ಸ್‌ಕಾನ್‌ನಂತಹ ಜಾಗತಿಕ ಮಟ್ಟದ ಕಂಪನಿಗಳು ಹೂಡಿಕೆ ಮಾಡುತ್ತಿರುವುದು ಯೋಜನೆಯ ಯಶಸ್ಸಿಗೆ ಸ್ಪಷ್ಟ ಸಾಕ್ಷಿ ಎಂದರು.
ಕರ್ನಾಟಕದಲ್ಲಿ ಫಾಕ್ಸ್‌ಕಾನ್ ಘಟಕ ಸ್ಥಾಪನೆಗಾಗಿ ಭೂಮಿ ಹಂಚಿಕೆಯಾಗಿದ್ದದ್ದು ಬಿಜೆಪಿ ಸರ್ಕಾರದ ಅವಧಿಯಲ್ಲೇ ನಡೆದಿದ್ದು, ಈ ಸತ್ಯವನ್ನು ಕಾಂಗ್ರೆಸ್ ಮರೆತಿದೆ. ಪ್ರಧಾನಿ ಮೋದಿ ಪರಿಚಯಿಸಿದ ಪಿಎಲ್‌ಐ (PLI) ಯೋಜನೆಯ ನೇರ ಲಾಭ ಪಡೆದಿರುವ ಕಂಪನಿಗಳಲ್ಲಿ ಫಾಕ್ಸ್‌ಕಾನ್ ಪ್ರಮುಖವಾಗಿದೆ. ಈ ಯೋಜನೆಯಡಿ 14,065 ಕೋಟಿ ರೂ. ಹೂಡಿಕೆ ಆಕರ್ಷಿಸಲ್ಪಟ್ಟಿದ್ದು, ಅಕ್ಟೋಬರ್ 2025ರ ವೇಳೆಗೆ 1.32 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಜೋಶಿ ತಿಳಿಸಿದ್ದಾರೆ.
ಭಾರತ ಈಗ ದೇಶೀಯವಾಗಿ ಚಿಪ್‌ಗಳು, ಎಲೆಕ್ಟ್ರಾನಿಕ್ ಘಟಕಗಳು ಮತ್ತು ಉಪ-ಮಾಡ್ಯೂಲ್‌ಗಳ ಉತ್ಪಾದನೆಯಲ್ಲಿ ಮುನ್ನಡೆ ಸಾಧಿಸುತ್ತಿದೆ. 2014-15ರಲ್ಲಿ ಕೇವಲ 0.18 ಲಕ್ಷ ಕೋಟಿ ರೂ. ಇದ್ದ ಮೊಬೈಲ್ ಫೋನ್ ಉತ್ಪಾದನೆ ಇಂದು 5.5 ಲಕ್ಷ ಕೋಟಿ ರೂ.ಗೆ ಏರಿದ್ದು, ಇದು 28 ಪಟ್ಟು ಹೆಚ್ಚಳವಾಗಿದೆ. ರಫ್ತು ಕೂಡ 0.01 ಲಕ್ಷ ಕೋಟಿ ರೂ.ನಿಂದ 2 ಲಕ್ಷ ಕೋಟಿ ರೂ.ಗೆ ಬೆಳೆಯಿದ್ದು, 127 ಪಟ್ಟು ಏರಿಕೆಯಾಗಿದೆ ಎಂದು ಅವರು ವಿವರಿಸಿದ್ದಾರೆ.
ಈ ಹಿಂದೆ ಭಾರತದಲ್ಲಿ ಫೋನ್‌ಗಳನ್ನು “ತಯಾರಿಸಲಾಗುವುದಿಲ್ಲ, ಕೇವಲ ಜೋಡಿಸಲಾಗುತ್ತದೆ” ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಗೆ ಇಂದು ದೇಶದ ಸ್ಮಾರ್ಟ್‌ಫೋನ್ ಉತ್ಪಾದನಾ ಘಟಕಗಳೇ ತಕ್ಕ ಉತ್ತರ ನೀಡಿವೆ ಎಂದು ಜೋಶಿ ಹೇಳಿದ್ದಾರೆ. ಬಿಜೆಪಿ ನೇತೃತ್ವದ ಸುಧಾರಣೆಗಳನ್ನು ಪ್ರಶ್ನಿಸುವುದು ಕಾಂಗ್ರೆಸ್‌ನ ಹತಾಶೆಯನ್ನು ಮಾತ್ರ ತೋರಿಸುತ್ತದೆ. ಭಾರತದ ಉತ್ಪಾದನಾ ಬೆಳವಣಿಗೆ ನಿರ್ಣಾಯಕ ನಾಯಕತ್ವದ ಫಲಿತಾಂಶವಾಗಿದ್ದು, ಇದು ಮೇಕ್ ಇನ್ ಇಂಡಿಯಾ ಯೋಜನೆಯ ಸ್ಪಷ್ಟ ಸಾಧನೆಯೇ ಆಗಿದೆ ಎಂದು ಪ್ರಲ್ಹಾದ್ ಜೋಶಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.



