ಕೊಪ್ಪಳ:- ಮ್ಯಾಟ್ರಿಮೋನಿ ಆ್ಯಪ್ ಮೂಲಕ ಅನೇಕ ಮಹಿಳೆಯರಿಗೆ ಮದುವೆ, ಕೆಲಸದ ಆಸೆ ತೋರಿಸಿ ಹಣ ಪಡೆಯುವುದನ್ನೇ ದಂಧೆ ಮಾಡಿಕೊಂಡಿದ್ದ ಕಿಲಾಡಿಯನ್ನು ಕೊಪ್ಪಳ ಪೊಲೀಸರು ಜೈಲಿಗಟ್ಟಿದ್ದಾರೆ.
ವಿಜಯಪುರ ಜಿಲ್ಲೆಯ ಹಿಟ್ಟಿನಹಳ್ಳಿ ಗ್ರಾಮದ ನಿವಾಸಿಯಾಗಿರುವ ಜೈಭೀಮ್ ಪಡಕೋಟಿ ಬಂಧಿತ ಆರೋಪಿ. ಈತ ಅನೇಕ ಮ್ಯಾಟ್ರಿಮೋನಿ ಆ್ಯಪ್ಗಳಲ್ಲಿ ತನ್ನ ಪ್ರೊಫೈಲ್ನ್ನು ಕ್ರಿಯೇಟ್ ಮಾಡಿ, ಅಲ್ಲಿ ತನ್ನ ಸುಂದರ ಭಾವಚಿತ್ರವನ್ನು ಹಾಕುತ್ತಿದ್ದ. ಜೊತೆಗೆ ತಾನು ಕೆಇಬಿಯಲ್ಲಿ ಕ್ಲಾಸ್ ಒನ್ ಆಫೀಸರ್ ಇದ್ದೇನೆ ಅಂತ ಮಾಹಿತಿ ಹಾಕುತ್ತಿದ್ದ. ನಂತರ ಆ್ಯಪ್ಗಳಲ್ಲಿ ಅನೇಕ ಯುವತಿಯರ ಪ್ರೊಫೈಲ್ಗಳನ್ನು ಚೆಕ್ ಮಾಡಿ, ಅವರ ನಂಬರ್ ಪಡೆಯುತ್ತಿದ್ದ. ಬಳಿಕ ಅವರ ಜೊತೆ ಚಾಟ್ ಮಾಡುತ್ತಿದ್ದ ಜೈಭೀಮ್, ಅವರಿಗೆ ಬಣ್ಣ ಬಣ್ಣದ ಮಾತುಗಳನ್ನು ಹೇಳಿ ನಂಬಿಸುತ್ತಿದ್ದ. ಇದೇ ರೀತಿ ಕೊಪ್ಪಳ ತಾಲೂಕಿನ ಹಳ್ಳಿಯೊಂದರ ಯುವತಿಯನ್ನ ಮ್ಯಾಟ್ರಿಮೋನಿ ಆ್ಯಪ್ ಮೂಲಕ ಪರಿಚಯ ಮಾಡಿಕೊಂಡು, ನಂತರ ಅವರ ಕುಟುಂಬದ ಬೆನ್ನುಬಿದ್ದು 2021 ರಲ್ಲಿ ಮದುವೆಯಾಗಿದ್ದ. ಆದರೆ ಮದುವೆಯಾಗಿ ಕೆಲವೇ ದಿನಕ್ಕೆ ಪತ್ನಿಗೆ ಕಿರುಕುಳ ಕೊಡಲು ಆರಂಭಿಸಿದ್ದ. ಹೀಗಾಗಿ ಮಹಿಳೆ ತವರು ಮನೆಗೆ ಬಂದಿದ್ದು, ತನ್ನ ಮಗು ಮತ್ತು ತಾಯಿ ಜೊತೆ ವಾಸ ಮಾಡುತ್ತಿದ್ದಾಳೆ.
ಮದುವೆಯಾದ ನಂತರ ಮಹಿಳೆಗೆ ಗೊತ್ತಾಗಿದೆ, ಜೈ ಭೀಮ್ ಸಾಧಾರಣ ವ್ಯಕ್ತಿಯಲ್ಲ, ಬದಲಾಗಿ ಅನೇಕರಿಗೆ ವಂಚಿಸುವುದೇ ಇತನ ಕಾಯಕ ಅಂತ. ಹೀಗಾಗಿ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ 2023 ರಲ್ಲಿ ಜೈಭೀಮ್ ವಿರುದ್ದ ದೂರು ನೀಡಿದ್ದಳು. ಆದರೆ ನಾನ್ ಬೇಲಬಲ್ ವಾರೆಂಟ್ ಇದ್ದರೂ ಕೂಡ ಪೊಲೀಸರಿಗೆ ಸಿಗದೇ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಕಿಲಾಡಿಯನ್ನು ಕೊಪ್ಪಳ ಮಹಿಳಾ ಠಾಣೆ ಪೊಲೀಸರು ಬಂಧಿಸಿ ಇದೀಗ ಜೈಲಿಗಟ್ಟಿದ್ದಾರೆ.