ಚಿತ್ರದುರ್ಗ:- ಸೊಂಟ ಸ್ವಾಧೀನವಿಲ್ಲದೇ ತೆವಳುವ ವಿಶೇಷಚೇತನರೊಬ್ಬರಿಗೆ ಸರ್ಕಾರದಿಂದ ವಿಶೇಷ ಸ್ಕೀಂ ಮಾಡಿಸಿಕೊಡುತ್ತೇನೆ ಎಂದು ನಂಬಿಸಿ ಹಣ ಪಡೆದು ವಂಚಿಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯ ನಿವಾಸಿ ಜಯಪ್ರಕಾಶ್ ಅವರು, ಚಿಲ್ಲರೆ ಅಂಗಡಿ ನಡೆಸುತ್ತಾ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದರು. ಇವರಿಗೆ ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂದು ಪರಿಚಯ ಮಾಡಿಕೊಂಡ ಮಂಜುನಾಥ್ ಎಂಬ ಆಸಾಮಿ, ನಿಮಗೆ ವಿಕಲಚೇತನರ ವಿಶೇಷ ಸ್ಕೀಂ ಮಾಡಿಸಿಕೊಡುತ್ತೇವೆ. ಅದರಿಂದ ನೀವು ಕಟ್ಟಿದ ಹಣವನ್ನು ದ್ವಿಗುಣಗೊಳಿಸಿ ಕೊಡುತ್ತೇವೆ. ಅದು ನಿಮ್ಮ ಮುಂದಿನ ಜೀವನೋಪಾಯಕ್ಕೆ ಸಹಕಾರಿಯಾಗಲಿದೆ ಎಂದು ಜಯಪ್ರಕಾಶ್ ಅವರನ್ನು ನಂಬಿಸಿ ವಂಚಿಸಿದ್ದಾರೆಂಬ ಆರೋಪ ಕೇಳಿಬಂದಿದೆ.
ಈ ಸ್ಕೀಂನಿಂದ ನನಗೂ ಒಳ್ಳೆಯ ಹೆಸರು ಬರಲಿದೆ ಎಂದು ಹೇಳಿ 13,500 ರೂ. ಹಣ ಪಡೆದು ಜಯಪ್ರಕಾಶ್‌ಗೆ ವಂಚಿಸಿದ್ದಾರೆ. ಹಣಕಟ್ಟಿ ಹಲವು ತಿಂಗಳಾದರು ಹಣ ಬಾರದ ಹಿನ್ನೆಲೆಯಲ್ಲಿ ನನ್ನ ಹಣ ನನಗೆ ವಾಪಸ್ ಕೊಡಿ ಎಂದು ಕೇಳಿದಾಗ, ಸರ್ಕಾರವು ಆ ಸ್ಕೀಂ ನಿಲ್ಲಿಸಿದೆ ಎಂದು ತಪ್ಪಿಸಿಕೊಂಡು ಓಡಾಡುತ್ತಾರೆ ಎಂದು ಆರೋಪಿಸಲಾಗಿದೆ.
ಅಲ್ಲದೇ ಇವರ ಮತ್ತೋರ್ವ ಸ್ನೇಹಿತ ವೆಂಕಟೇಶ ಎಂಬ ಆಸಾಮಿ ಕೂಡ ಮನೆ ಸಮಸ್ಯೆಗಾಗಿ ಇವರಿಂದ 20 ಸಾವಿರ ರೂ. ಹಣವನ್ನು ಸಾಲವಾಗಿ ಪಡೆದು ವಂಚಿಸಿದ್ದಾರೆಂದು ಆರೋಪಿಸಿದ್ದಾರೆ. ಇದರಿಂದ ಮನನೊಂದ ಜಯಪ್ರಕಾಶ್, ಪ್ರಾಂಸರಿ ಪತ್ರ ಸೇರಿದಂತೆ ಇತರೆ ದಾಖಲೆಗಳ ಸಹಿತ ಚಿತ್ರದುರ್ಗ ನಗರ ಠಾಣೆ ಪೊಲೀಸರು ಹಾಗೂ ಎಸ್ಪಿಗೆ ದೂರು ನೀಡಿದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ ನನ್ನ ಜೀವನ ಕಷ್ಟಕರವಾಗಿದೆ ಎಂದು ಜಯಪ್ರಕಾಶ್ ಅಸಹಾಯಕತೆ ಹೊರಹಾಕಿದ್ದಾರೆ.