ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆ ನಿರ್ಮಾಣದ ಕಾಮಗಾರಿಯ ತಳಪಾಯದಲ್ಲಿ ಸಿಕ್ಕ ಚಿನ್ನಾಭರಣಗಳ ನಿಧಿಯನ್ನು ಪ್ರಾಮಾಣಿಕವಾಗಿ ಸರಕಾರಕ್ಕೆ ತಲುಪಿಸಿದ ಬಿ.ಎಚ್. ಪಾಟೀಲ ಸಂಸ್ಥೆಯ ವಿದ್ಯಾರ್ಥಿ ಪ್ರಜ್ವಲ್ ರಿತ್ತಿ ಅವರಿಗೆ ಪಿ.ಯು.ಸಿವರೆಗೂ ಉಚಿತ ಶಿಕ್ಷಣ ನೀಡಲಾಗುವುದು ಎಂದು ಸಂಸ್ಥೆಯ ಉಪಾಧ್ಯಕ್ಷ, ಜಿ.ಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ಹೇಳಿದರು.
ಇಲ್ಲಿಯ ಜನತಾ ವಿದ್ಯಾವರ್ದಕ ಸಂಸ್ಥೆಯ ಬಿ.ಎಚ್. ಪಾಟೀಲ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ 8ನೇ ತರಗತಿಯಲ್ಲಿ ಓದುತ್ತಿರುವ ಪ್ರಜ್ವಲ್ ರಿತ್ತಿಯವರನ್ನು ಸನ್ಮಾನಿಸಿ ಮಾತನಾಡಿದ ಅವರು, ಸಂಸ್ಥೆಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸರ್ವ ಪದಾಧಿಕಾರಿಗಳ ಸಭೆ ಕರೆದು ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದರು.
ಶಾಲೆಯಲ್ಲಿ ಪ್ರಾಮಾಣಿಕತೆಯಿಂದ ಓದುತ್ತಿರುವ ಪ್ರಜ್ವಲ್ ತನ್ನ ಮನೆ ನಿರ್ಮಾಣದ ಪಾಯದಲ್ಲಿ ದೊರೆತ ಅಮೂಲ್ಯವಾದ ಚಿನ್ನಾಭರಣಗಳ ನಿಧಿಯನ್ನು ಸರಕಾರಕ್ಕೆ ನೀಡಿ ಸಾಮಾಜಿಕ ಬದುಕಿನಲ್ಲಿಯೂ ಸಹ ಪ್ರಾಮಾಣಿಕತೆ ತೋರಿದ್ದು, ಅವರ ಭವಿಷ್ಯದ ಶಿಕ್ಷಣಕ್ಕೆ ಜನತಾ ವಿದ್ಯಾವರ್ದಕ ಸಂಸ್ಥೆಯು ಪಿ.ಯು.ವರೆಗೂ ಉಚಿತ ಶಿಕ್ಷಣವನ್ನು ನೀಡುತ್ತದೆ ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಐ.ಎನ್. ಕುಂಬಾರ ಮಾತನಾಡಿ, ಪ್ರಜ್ವಲ್ನಂತಹ ಪ್ರಾಮಾಣಿಕ ವಿದ್ಯಾರ್ಥಿಗಳು ಮನೆ ಮನೆಯಲ್ಲಿ ಇರಬೇಕು. ಅಂದಾಗ ಮಾತ್ರ ನಮ್ಮ ಸಂಸ್ಥೆ ಮತ್ತು ಗ್ರಾಮಕ್ಕೆ ಕೀರ್ತಿ ಬರುತ್ತದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ ಎಫ್. ತೋಪಿನ, ಸದಸ್ಯರಾದ ವಿ.ವಿ. ಗಂಧದ, ಕೆ.ಎಂ. ಪಾಟೀಲ, ತಿಪ್ಪಣ್ಣ ಅಂಬಕ್ಕಿ, ಮಲ್ಲಪ್ಪ ಕಮತರ, ಪ್ರಾಚಾರ್ಯ ಬಿ.ವಿ. ಪಾಟೀಲ, ಪ್ರೌಢಶಾಲೆಯ ಹಿರಿಯ ಶಿಕ್ಷಕ ಎ.ಎನ್. ಪೂಜಾರ, ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.



