ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕಾಗಿ 12 ದಿನಗಳಿಂದ ರೈತ ಸಂಘಟನೆಗಳು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ವೇದಿಕೆಯಲ್ಲಿ ರೈತರ ಸಂಘಟನೆಗಳ ಒಕ್ಕೂಟದಿಂದ ಮಂಗಳವಾರ ಉಚಿತ ಆರೋಗ್ಯ ಶಿಬಿರ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರ ಜನ್ಮದಿನೋತ್ಸವ ಆಚರಿಸುವ ಮೂಲಕ 12ನೇ ದಿನದ ಹೋರಾಟವನ್ನು ಅರ್ಥಪೂರ್ಣವಾಗಿ ಪೂರೈಸಲಾಯಿತು.
ಹೋರಾಟದ ವೇದಿಕೆಯ ಸಾನ್ನಿಧ್ಯ ವಹಿಸಿದ್ದ ಶಿರಹಟ್ಟಿಯ ಫಕ್ಕಿರೇಶ್ವರ ಸಂಸ್ಥಾನಮಠದ ಜ. ಫಕೀರ ಸಿದ್ದಾರಾಮ ಮಹಾಸ್ವಾಮಿಗಳು ಮಾತನಾಡಿ, ರೈತರು ಈ ದೇಶದ ಸಂಪತ್ತು. ಅತಿವೃಷ್ಟಿ, ಅನಾವೃಷ್ಟಿ, ರೋಗಬಾಧೆ, ಬೆಲೆ ಕುಸಿತ ಹತ್ತಾರು ಸಮಸ್ಯೆಗಳ ನಡುವೆ ಬೆವರು ಸುರಿಸಿ ದುಡಿಯುವ ರೈತರ ಬೆನ್ನಿಗೆ ಸರ್ಕಾರ ನಿಲ್ಲಬೇಕು. ರೈತರು ತಮ್ಮ ಬೇಡಿಕೆಗಳನ್ನು ಹೋರಾಟದ ಮೂಲಕ ಪಡೆಯುವುದು ಸರಿಯಲ್ಲ. ಸಕಲ ಜೀವರಾಶಿಗಳಿಗೆ ಅನ್ನ ನೀಡುವ ರೈತರ ಬದುಕು ಸದಾ ಹಸನಾಗಿರಬೇಕು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ ಅವರು ಈ ನಾಡಿನ ಬಡ ಜನರ ಬದುಕಿನ ಬೆಳಕಾಗಿದ್ದಾರೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಅನ್ನದಾನ, ವಿದ್ಯಾದಾನ, ಆರೋಗ್ಯದಾನ, ಅಭಯದಾನಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದೊಂದಿಗೆ ಶ್ರಮಿಸುತ್ತಿದೆ. ಗ್ರಾಮಗಳ ಅಭಿವೃದ್ಧಿಯೇ ರಾಷ್ಟ್ರಾಭಿವೃದ್ಧಿಗೆ ಮೂಲಾಧಾರ ಎಂಬ ಪರಿಕಲ್ಪನೆಯೊಂದಿಗೆ ಗ್ರಾಮೀಣ ಜನರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಅನೇಕ ಯೋಜನೆಗಳನ್ನು ರೂಪಿಸುವ ಮೂಲಕ ಸರಕಾರದ ಅಂಗ ಸಂಸ್ಥೆಯಂತೆ ನಿಸ್ವಾರ್ಥ ಸೇವೆ, ಸಾಮಾಜಿಕ ಕಳಕಳಿ ತೋರುತ್ತಿದೆ ಎಂದರು.
ಈ ವೇಳೆ ಆದ್ರಳ್ಳಿ ಗವಿಮಠದ ಶ್ರೀ ಕುಮಾರ ಮಹಾರಾಜರು, ಕುಂದಗೋಳದ ಬಸವಣ್ಣಜ್ಜನವರು, ಬಟಗುರ್ಕಿ ಶ್ರೀಗಳು ಉಪಸ್ಥಿತರಿದ್ದರು. ಕೆ.ಹೆಚ್. ಪಾಟೀಲ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹಿರಿಯ ವೈದ್ಯರಾದ ಡಾ. ಪ್ರಕಾಶ ಹೊಸಮನಿ ನೇತೃತ್ವದ ವೈದ್ಯರ ತಂಡದಿಂದ ನಡೆದ ಉಚಿತ ಆರೋಗ್ಯ ಶಿಬಿರದಲ್ಲಿ ನೂರಾರು ರೈತರಿಗೆ ಇಸಿಜಿ, ಇಕೋ, ಬಿಪಿ, ಶುಗರ್ ಪರೀಕ್ಷೆ ಮಾಡಲಾಯಿತು.
ವೈದ್ಯರನ್ನು ಶ್ರೀಗಳು, ರೈತರು ಸನ್ಮಾನಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಹೆಗ್ಗಡೆ ಅವರ ಜನ್ಮ ದಿನಾಚರಣೆ ಅಂಗವಾಗಿ ರೈತರಿಗೆ ಹಣ್ಣು ವಿತರಿಸಲಾಯಿತು.



