ವಿಜಯಸಾಕ್ಷಿ ಸುದ್ದಿ, ರೋಣ: ಪಟ್ಟಣದ ಪ್ರತಿಷ್ಠಿತ ಮಾತೋಶ್ರೀ ಬಸಮ್ಮನವರು ಸಂಗನಗೌಡ ಪಾಟೀಲರವರ 21ನೇ ಪುಣ್ಯ ಸ್ಮರಣೆ ನಿಮಿತ್ತ ನಾಗರಿಕ ಸಮಾಜಕ್ಕೆ ಉಪಯುಕ್ತವಾಗುವ, ಸಮಾಜಮುಖಿ ಕಾರ್ಯಗಳು ನಡೆಯಲಿವೆ ಎಂದು ಸ್ಮರಣೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವಿ.ಬಿ. ಸೋಮನಕಟ್ಟಿಮಠ ಹೇಳಿದರು.
ಅವರು ರವಿವಾರ ಆರ್‌ಜಿಎಸ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಮಾತೋಶ್ರೀ ಬಸಮ್ಮನವರ ಪುಣ್ಯ ಸ್ಮರಣೆ ನಿಮಿತ್ತ ಹಮ್ಮಿಕೊಳ್ಳುವ ಉಚಿತ ನೇತ್ರ ತಪಾಸಣೆಯಿಂದ 2700 ಜನರಿಗೆ ಅನುಕೂಲವಾಗಿದೆ. ಜುಲೈ 29ರಂದು ಬೆಳಿಗ್ಗೆ 10ಕ್ಕೆ ಗಜೇಂದ್ರಗಡ ಪಟ್ಟಣದ ಕುಷ್ಠಗಿ ರಸ್ತೆ ಬಳಿಯಿರುವ ಸಾಯಿದತ್ತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಹೃದಯ ತಪಾಸಣೆ ಶಿಬಿರ ಜರುಗಲಿದ್ದು, ಹೃದಯ ಸಂಬಂಧಿ ಕಾಯಿಲೆ ಹೊಂದಿರುವವರರು ಈ ಶಿಬಿರದಲ್ಲಿ ಭಾಗಿಯಾಗಬೇಕು. ಸಂಜೆ 6ಕ್ಕೆ ಗಜೇಂದ್ರಗಡ ಪಟ್ಟಣದ ಕೆ.ಜಿ. ಬಂಡಿ ಗಾರ್ಡನ್‌ನಲ್ಲಿ ಸರ್ವಧರ್ಮ ಗೋಷ್ಠಿ ಏರ್ಪಡಿಸಲಾಗಿದ್ದು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು.
ಜುಲೈ 30ರಂದು ಬೆಳಿಗ್ಗೆ 10ಕ್ಕೆ ಆರ್‌ಜಿಎಸ್ ಆಸ್ಪತ್ರೆಯಲ್ಲಿ 9ರಿಂದ 14 ಹಾಗೂ 14ರಿಂದ 18 ವರ್ಷದ ಹೆಣ್ಣು ಮಕ್ಕಳಿಗೆ ಗರ್ಭಾಶಯ ಹಾಗೂ ವಿವಿಧ ಕ್ಯಾನ್ಸರ್‌ಗಳನ್ನು ತಡೆಗಟ್ಟುವ ಹೆಚ್‌ವಿಪಿ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು. ಜುಲೈ 31ರಂದು ಸಂಜೆ 6ಕ್ಕೆ ನರೆಗಲ್ಲ ಪಟ್ಟಣದ ರೇಣುಕಾಚಾರ್ಯ ಶಾಲಾ ಆವರಣದಲ್ಲಿ ಮಹಿಳಾ ಗೋಷ್ಠಿ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿದ ಮಠಾಧೀಶರು, ಶಾಸಕರು, ಮಾಜಿ ಶಾಸಕರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ವೀರಭದ್ರಗೌಡ ಪಾಟೀಲ, ಬಸವರಾಜ ನವಲಗುಂದ, ರವಿ ಸಂಗನಬಸಶೆಟ್ಟರ, ಸಿದ್ದಣ್ಣ ನವಲಗುಂದ, ಡಾ. ಐ.ಬಿ. ಕೊಟ್ಟೂರಶೆಟ್ಟರ, ಡಾ. ಅಂಗಡಿ ಸೇರಿದಂತೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಆಗಸ್ಟ್ 1ರಂದು ಮಾತೋಶ್ರೀಯವರ 21ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ಜಕ್ಕಲಿ ರಸ್ತೆಯಲ್ಲಿರುವ ಸಮಾಧಿ ಬಳಿ ನಡೆಯಲಿದ್ದು, ನಂತರ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜರುಗುವ ಸಭೆಯಲ್ಲಿ ಕರ್ನಾಟಕ ಸರಕಾರದ ನಿವೃತ್ತ ಮುಖ್ಯಕಾರ್ಯದರ್ಶಿಗಳು, ಬಿಬಿಎಂಪಿ ಕ್ಷೇತ್ರ ವಿಂಗಡನೆ ಅಧ್ಯಕ್ಷರು, ನಾಡಫಭ್ರು ಕೆಂಪೆಗೌಡ ಪ್ರಶಸ್ತಿ ಪುರಸ್ಕೃತರಾದ ಬಿ.ಎಸ್. ಪಾಟೀಲರಿಗೆ ಸ್ಮರಣೋತ್ಸವ ಸಮಿತಿಯಿಂದ ಸನ್ಮಾನ ಕಾರ್ಯ ನಡೆಯಲಿದೆ ಎಂದು ವಿ.ಬಿ. ಸೋಮನಕಟ್ಟಿಮಠ ತಿಳಿಸಿದರು.



