ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಎಲ್ಲ ಸಂಪತ್ತುಗಳಿಗಿಂತ ಆರೋಗ್ಯ ಸಂಪತ್ತು ಬಹುಮುಖ್ಯ. ದುಬಾರಿ ದುನಿಯಾದಲ್ಲಿ ಗ್ರಾಮೀಣ ಮತ್ತು ಪಟ್ಟಣಗಳ ಬಡ ವರ್ಗದ ಜನರಿಗೆ ಉಚಿತವಾಗಿ ಉತ್ತಮ ಆರೋಗ್ಯ ಸೇವೆ, ಚಿಕಿತ್ಸೆ ಕಲ್ಪಿಸುವಲ್ಲಿ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ ಎಂದು ಖ್ಯಾತ ಹೃದಯರೋಗ ತಜ್ಞ ಡಾ.ಅಮಿತ್ ಸತ್ತೂರ ಹೇಳಿದರು.
ಅವರು ಪಟ್ಟಣದ ಬಾಲಾಜಿ ಆಸ್ಪತ್ರೆಯಲ್ಲಿ ಮಂಗಳವಾರ ಬಾಲಾಜಿ ಆಸ್ಪತ್ರೆ ಮತ್ತು ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.
ಇಂದಿನ ದಿನಮಾನಗಳಲ್ಲಿ ಕಲುಷಿತ ವಾತಾವರಣ, ಕಲಬೆರಕೆ ಆಹಾರ, ಒತ್ತಡದ ಬದುಕಿನಿಂದ ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಜನರು ಅನಾರೋಗ್ಯಕ್ಕೆ ಒಳಗಾಗದಂತೆ ಮುಂಜಾಗ್ರತೆ ವಹಿಸುವದು ಅಗತ್ಯ. ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಹೆಚ್ಚು ಉಪಯುಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಶಾಸಕರಾಗಿ ಜನಸೇವೆಯಲ್ಲಿ ನಿರತರಾಗಿರುವ ಡಾ.ಚಂದ್ರು ಲಮಾಣಿ ಅವರು ತಮ್ಮ ವೃತ್ತಿ ಮತ್ತು ಬಡ ಜನರ ಬಗ್ಗೆ ಹೊಂದಿರುವ ಕಾಳಜಿಯೇ ಇಂತಹ ಜನೋಪಯೋಗಿ ಕಾರ್ಯಕ್ರಮಗಳಿಗೆ ಕಾರಣ ಎಂದು ಹೇಳಿದರು.
ಕಾರ್ಯಕ್ರಮದ ರೂವಾರಿ ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿ, ಇದೀಗ ಎಲ್ಲೆಡೆ ಅನೇಕ ವೈದ್ಯ ವೃಂದವು ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿದ್ದಾರೆ. ವೈದ್ಯರ ಬಗ್ಗೆ ಜನರಲ್ಲಿ ಅಪಾರ ಗೌರವವಿದೆ. ಕೋವಿಡ್ ನಂತರ ಆರೋಗ್ಯ ಸೇವೆಯಲ್ಲಿ ಅನೇಕ ಬದಲಾವಣೆಗಳನ್ನು ಕಂಡಿದ್ದೇವೆ. ಗ್ರಾಮೀಣ ಭಾಗದ ಸಾಮಾನ್ಯ ಜನರು ದೂರದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲಾಗದ ಸ್ಥಿತಿಯಲ್ಲಿದ್ದಾರೆ. ಸ್ವತಃ ನನಗೂ ಬಡತನದ ಬಗ್ಗೆ ಅರಿವಿದ್ದು ನೀಡಿದ ಆರೋಗ್ಯ ಸೇವೆಯೇ ನಾನು ಶಾಸಕನಾಗಲು ಅವಕಾಶ ಒದಗಿಸಿದೆ ಎಂದರು.
400ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು. ಶಿಬಿರದಲ್ಲಿ ಇಸಿಜಿ, 2ಡಿ ಇಕೋ ಹಾಗೂ ಔಷಧಿಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ತಜ್ಞ ವೈದ್ಯರಾದ ಡಾ. ರಾಜು ಕದಮ್, ಡಾ. ಜಯಪ್ರಭು ಉತ್ತೂರ, ಡಾ. ಗೋವಿಂದ ದೇಸಾಯಿ, ಡಾ. ಸಂದೀಪ ಕುಂಬಾರ, ಡಾ. ಸೀತಾ ಮುತಾಲಿಕ್, ಡಾ. ವೆಂಕಟೇಶ ಎಚ್.ವಿ., ಡಾ. ಮಾಂತೇಶ ಹೊಸಮನಿ, ಡಾ. ಪ್ರದೀಪ ಬಾಕಕೇರ, ನವೀನ ಬೆಳ್ಳಟ್ಟಿ, ಗಿರೀಶ ಚೌರಡ್ಡಿ, ಬಸವರಾಜ ಚಕ್ರಸಾಲಿ ಸೇರಿದಂತೆ ಅನೇಕರಿದ್ದರು.
ಕ್ಷೇತ್ರದ ಜನರ ಋಣ ತೀರಿಸಲು ನನಗಿರುವ ದೊಡ್ಡ ಅವಕಾಶ ಆರೋಗ್ಯ ಸೇವೆ. ನಿರಂತರವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಮಾಡಲಾಗುತ್ತದೆ. ಇಂತಹ ಶಿಬಿರದಿಂದ ಬಡ ಜನರಿಗೆ ಅನೂಕೂಲವಾದರೆ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ. ಬಿಡುವಿರದ ಸಮಯದಲ್ಲಿ ಉಚಿತ ಸೇವೆ ನೀಡಲು ಹುಬ್ಬಳ್ಳಿಯಿಂದ ಆಗಮಿಸಿದ ಎಲ್ಲ ವೈದ್ಯರಿಗೂ ಕ್ಷೇತ್ರದ ಜನತೆಯ ಪರವಾಗಿ ಧನ್ಯವಾದ ಅರ್ಪಿಸುವೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.