ಮೈಸೂರು: ನಾಳೆ ಐಪಿಎಲ್ ಫೈನಲ್ ಪಂದ್ಯಕ್ಕೆ ಕೌಂಟ್ಡೌನ್ ಶುರುವಾಗಿದೆ. ಈಗಾಗಲೇ ಪಂದ್ಯದ ಜೋಶ್ ಎಲ್ಲ ಕಡೆ ಹರಿದಾಡುತ್ತಿದೆ. ಬೆಂಗಳೂರಿನಲ್ಲೂ ನಾಳಿನ ಫೈನಲ್ ಪಂದ್ಯ ನೋಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಮೇ 29 ರಂದು ಐಪಿಎಲ್ 2025ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಆರ್‌ಸಿಬಿ ಪಡೆ ಮತ್ತೊಮ್ಮೆ ಫೈನಲ್ಗೆ ಲಗ್ಗೆಯಿಟ್ಟಿತ್ತು.
ಅಂದರೆ 2016 ರಲ್ಲಿ ಮೇ 29 ರಂದು ನಡೆದ ಫೈನಲ್ನಲ್ಲಿ ಸೋತಿದ್ದ ಆರ್‌ಸಿಬಿ, 2025ರ ಮೇ 29 ರಂದೇ ಫೈನಲ್ಗೇರುವಲ್ಲಿ ಯಶಸ್ವಿಯಾಗಿತ್ತು. ಇದೀಗ ನಾಳೆ ಆರ್‌ಸಿಬಿ ಫೈನಲ್ನಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ.
ಇದರ ನಡುವೆ ನಾಳಿನ ಆರ್‌ಸಿಬಿ ಮತ್ತು ಪಂಜಾಬ್ ನಡುವಿನ ಪಂದ್ಯದಲ್ಲಿ ಆರ್‌ಸಿಬಿ ಕಪ್ ಗೆದ್ದರೆ ಮೈಸೂರಿನ ಎಲ್ಲಾ ಇಂದಿರಾ ಕ್ಯಾಂಟೀನ್ ಗಳಲ್ಲೂ ಉಚಿತ ಹೋಳಿಗೆ ಊಟ ಹಾಕಲಿದ್ದಾರೆ. ಮೈಸೂರಿನ ಆರ್‌ಸಿಬಿ ಅಭಿಮಾನಿ ಬಸವರಾಜ ಬಸಪ್ಪ ಘೋಷಣೆ ಮಾಡಿದ್ದಾರೆ. ಮತ್ತು ಇದರ ಸಾಂಕೇತಿಕವಾಗಿ ಇವತ್ತೇ ಉಚಿತ ಹೋಳಿಗೆ ಊಟ ವಿತರಣೆ ಮಾಡಲಾಗಿದೆ.
ಹೌದು ನಾಳೆ ಮೈಸೂರಿನ 16 ಕ್ಯಾಂಟೀನ್ ಗಳಲ್ಲೂ ಉಚಿತ ಹೋಳಿಗೆ ಊಟ ನೀಡಲಾಗುತ್ತದೆ. ಇತ್ತ ಸಿಎಂ ಸಿದ್ದರಾಮಯ್ಯ ಬಳಿ ಮೈಸೂರಿನ ಆರ್‌ಸಿಬಿ ಅಭಿಮಾನಿ ಬಸವರಾಜ ಬಸಪ್ಪ ಮನವಿ ಮಾಡಿದ್ದಾರೆ. ಆರ್ ಸಿಬಿ ಗೆದ್ದರೆ ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟೀನ್ ಗಳಲ್ಲೂ ಉಚಿತ ಹೋಳಿಗೆ ಊಟ ಹಾಕಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.