ವಿಜಯಸಾಕ್ಷಿ ಸುದ್ದಿ, ಗದಗ: ಸಮೀಪದ ತಿಮ್ಮಾಪೂರ ಗ್ರಾಮದ ಶ್ರೀ ಕರಿಯಮ್ಮ ದೇವಿ ಸಮುದಾಯ ಭವನದಲ್ಲಿ ಕೃಷಿ ಇಲಾಖೆ ಗದಗ ಸಹಯೋಗದಲ್ಲಿ 2025-26ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಯೋಜನೆಯಡಿ ಸೂರ್ಯಕಾಂತಿ ಬೀಜ ವಿತರಣೆ ಹಾಗೂ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಗದಗ ಜಿಲ್ಲಾ ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಸ್ಪೂರ್ತಿ ಜಿ.ಎಸ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಪ್ರಸ್ತುತ ಮಳೆ ಕೊರತೆ ಆವರಿಸಿ ಮುಂಗಾರು ಬೆಳೆಗಳು ಒಣಗುತ್ತಿದ್ದು, ರೈತರು ಹತಾಶೆಗೆ ಒಳಗಾಗಬಾರದು ಎಂದು ರೈತರಿಗೆ ಕೃಷಿ ಇಲಾಖೆಯಿಂದ ಉಚಿತವಾಗಿ ಸೂರ್ಯಕಾಂತಿ ಬೀಜಗಳನ್ನು ವಿತರಿಸಲಾಗಿದೆ. ರೈತರು ಪರ್ಯಾಯ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು, ಮಣ್ಣು ಮತ್ತು ನೀರು ಸಂರಕ್ಷಣೆ, ತೇವಾಂಶ ನಿರ್ವಹಣೆಗೆ, ಹಸಿರೆಲೆ ಗೊಬ್ಬರ ಹಾಗೂ ಕೊಟ್ಟಿಗೆ ಗೊಬ್ಬರ ಬಳಕೆ ಮಾಡಬೇಕು ಎಂದರು.
ನಮ್ಮಲ್ಲಿ ನೀರಾವರಿ ಸೌಲಭ್ಯ ಪಡೆಯಲು ಸ್ಪಿಂಕ್ಲರ್ ಪೈಪ್, ಇಂಜಿನ್, ಬಿತ್ತನೆಗೆ ಕುರಿಗಿ ಕುಂಟೆ ರಾಶಿ ಮಾಡುವ ಯಂತ್ರಗಳನ್ನು ಹಾಗೂ ಕೀಟನಾಶಕಗಳನ್ನು ಸಬ್ಸಿಡಿ ದರದಲ್ಲಿ ವಿತರಣೆ ಮಾಡಲಾಗುತ್ತದೆ. ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗದಗ-ಬೆಟಗೇರಿ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಬಸವ ರಾಜೇಶ್ವರಿ ಸಜ್ಜನರ, ಸಹಾಯಕ ಕೃಷಿ ಅಧಿಕಾರಿ ರಮೇಶ ಜತ್ತಿ, ಕೃಷ್ಣಾರೆಡ್ಡಿ ಮೇಟಿ, ಸುಶ್ಮಿತಾ, ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ, ಬಾಳಪ್ಪ ಗಂಗರಾತ್ರಿ, ಶರಣಪ್ಪ ಜೋಗಿನ, ಮಲ್ಲಿಕಾರ್ಜುನ್ ಇದ್ಲಿ, ಭೀಮಪ್ಪ ರಾಮಜಿ ಮುಂತಾದವರಿದ್ದರು.