ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಜಗತ್ತಿನಲ್ಲಿ ಎಲ್ಲಕ್ಕಿಂತ ಸ್ನೇಹ ದೊಡ್ಡದು. ಸುಧಾಮ-ಕೃಷ್ಣರ ಅಪ್ಪಟ ಸ್ನೇಹ ವಿಶ್ವಕ್ಕೆ ಮಾದರಿಯಾಗಿದೆ. ಕಷ್ಟ-ಸುಖದಲ್ಲಿ ಭಾಗಿಯಾಗುವವರೇ ನಿಜವಾದ ಸ್ನೇಹಿತರು ಎಂದು ಬಳಗದ ಸದಸ್ಯ ಹಾಗೂ ಧಾರವಾಡ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಎಲ್.ಟಿ. ನಾಯಕ ಹೇಳಿದರು.
ಪಟ್ಟಣದ ಎಪಿಎಂಸಿ ವ್ಯಾಪಾರಸ್ಥರ ಸಂಘದಲ್ಲಿ ಭಾನುವಾರ ಪುರಸಭೆಯ ಉಮಾ ವಿದ್ಯಾಲಯ ಪ್ರೌಢಶಾಲೆಯಲ್ಲಿ 1984-85ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿದ ಗೆಳಯರ ಬಳಗದ 5ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ಉಪನ್ಯಾಸಕ ಮಂಜುನಾಥ ಹೊಳ್ಳಿಯವರಮಠ ಮಾತನಾಡಿ, ಉತ್ತಮ ಸ್ನೇಹಿತರು ಸಿಕ್ಕರೆ ಬದುಕು ಸ್ವಾರಸ್ಯಕರವಾಗುತ್ತದೆ. ಪ್ರತಿದಿನ ಸ್ನೇಹಿತರೊಡನೆ ಒಡನಾಟ ಇಟ್ಟುಕೊಂಡು ಅವರೊಂದಿಗೆ ಕಷ್ಟ-ಸುಖ ಹಂಚಿಕೊಳ್ಳಬೇಕು. ಅಂದಾಗ ಮಾತ್ರ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳಿಂದ ಹೊರ ಬರಲು ಸಾಧ್ಯ. ಸ್ನೇಹದಲ್ಲಿ ಸ್ವಾರ್ಥ ಇರಬಾರದು. ಅಂಥ ಸ್ನೇಹ ಬಹಳ ದಿನ ಉಳಿಯಲಾರದು ಎಂದು ಹೇಳಿದರು.
ಮಹಾಬಳೇಶ್ವರ ಮೆಡೇರಿ, ರುದ್ರಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಮಹೇಶ ಕರೆಕಲ್ಲ, ಸುಮಾ ಚೋಟಗಲ್ಲ, ಬಳಗದ ಸದಸ್ಯರಾದ ಶಿವಶಂಕರ ಬಿಂದಕಟ್ಟಿ ಮತ್ತು ಚಂದ್ರಶೇಖರ ಸಂಕಣ್ಣವರ ಮಾತನಾಡಿದರು. ಬಿ.ಎಂ. ಕೆರೂರ, ಮಧುಸೂದನ ದೇಶಪಾಂಡೆ, ಪಿ.ಎಸ್. ಬಾಳಿಹಳ್ಳಿಮಠ, ಎಲ್.ಎನ್. ನಂದೆಣ್ಣವರ, ಸರಿತಾ ಕನವಳ್ಳಿ, ಮೀನಾ ಹಿರೇಮಠ, ಪಿ.ಎಸ್. ಬಾಳಿಹಳ್ಳಿಮಠ, ಸೋಮಣ್ಣ ಲಮಾಣಿ ಇದ್ದರು.
ಕೆ.ಎಸ್. ಬಾಳೇಶ್ವರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಹೆಬ್ಬಾಳ, ಬಿ.ಎಂ. ಕುಂಬಾರ, ಚಂದ್ರಶೇಖರ ಚಟ್ಲಿ, ಸುರೇಶ ಚೋಟಗಲ್, ಚಂದ್ರಶೇಖರ ವಡಕಣ್ಣವರ ನಿರೂಪಿಸಿದರು. ಉಮಾ ವಿದ್ಯಾಲಯ ಪ್ರೌಢಶಾಲೆಯಲ್ಲಿ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸರಿತಾ ಕನವಳ್ಳಿ, ಕುಮಾರಿ ಅಂಗಡಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ವೆಂಕಟೇಶ ಪಾಟೀಲ, ಅಕ್ಷಯ ಭಜಂತ್ರಿ ತಬಲಾ ಸಾಥ್ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬಳಗದ ಅಧ್ಯಕ್ಷ ನಾಗರಾಜ ಹಣಗಿ ಮಾತನಾಡಿ ಬಳಗದ ವತಿಯಿಂದ ಕೊರೊನಾ ಸಮಯದಲ್ಲಿ ಬಡವರಿಗೆ ಆಹಾರ ಕಿಟ್ ವಿತರಣೆ, ಪರಿಸರ ದಿನಾಚರಣೆ ಸೇರಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಲಾಗುತ್ತಿದೆ. ತಿಂಗಳ ಕೊನೆಯ ಭಾನುವಾರ ದೇವಸ್ಥಾನ, ರುದ್ರಭೂಮಿ ಸ್ವಚ್ಛಗೊಳಿಸುವ ಕೆಲಸಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ಎಲ್ಲ ಸದಸ್ಯರ ಸಹಕಾರ ಮುಖ್ಯ ಎಂದರು.