ಗೆಳೆತನ
ಗೆಳೆತನದ ಸಿರಿತನ ಬಿಡಿಸಲಾಗದ ಬಂಧನ. ಒಂದು ನಿಷ್ಕಲ್ಮಶ ಗೆಳೆತನ ಮನಸಿನ ನೋವ ಮರೆಸುವ ಸುಂದರ ವನ. ನೆಚ್ಚಿನ ಮಾತುಗಳು, ಸಮಯದ ವ್ಯವಕಲನವು, ನಿತ್ಯ ನವೀನ ಭೇಟಿಯಲ್ಲಿ ಬೀಗಿಯಾಗಿದೆ ದಿನೇ ದಿನೇ ಗೆಳೆತನದ ಹೂರಣವು.
ಹೌದು ಒಬ್ಬ ವ್ಯಕ್ತಿಯ ಜೀವನ ಪರಿಪೂರ್ಣತೆ ಹೊಂದುವಲ್ಲಿ ಒಬ್ಬ ಗೆಳೆಯ/ಗೆಳತಿಯ ಪಾತ್ರವು ಸಹಿತ ಅತೀ ಸುಂದರ ಹಾಗೂ ಅದ್ಬುತ ಎನ್ನಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಪ್ರತಿಯೊಬ್ಬರ ಬದುಕಿನಲ್ಲೂ ಸಹಿತ ಅದ್ಭುತ ಪರಿಚಯ ಎನ್ನಿಸುವಂತಹ ಸ್ನೇಹ ಇದ್ದೆ ಇರುತ್ತದೆ. ಅದರಲ್ಲಿ ಕೆಲವೊಂದಿಷ್ಟು ಸ್ನೇಹ ತಾತ್ಕಾಲೀಕವಾಗಿದ್ದರೆ ಇನ್ನೊಂದಿಷ್ಟು ಸ್ನೇಹ ರಕ್ತ ಸಂಭಂದಕ್ಕಿಂತ ಹೆಚ್ಚಾಗಿ ಬದುಕಿನ ಕೊನೆಯ ಘಟ್ಟದವರೆಗೂ ಜೊತೆಯಾಗಿ ನಮ್ಮ ಪ್ರತಿ ನೋವು ನಲಿವಿನಲ್ಲೂ ಕೈಹಿಡಿದು ನಮ್ಮ ಮನಸ್ಸಿನ ಕನ್ನಡಿಯಂತೆ ಬದುಕಿನ ಉದ್ದಕ್ಕೂ ಮಾರ್ಗದರ್ಶಕರಾಗಿ, ಬೆಳಕಾಗಿ, ಜೊತೆಯಾಗಿರುವುದೇ ನಿಷ್ಕಲ್ಮಶ ಗೆಳೆತನವಾಗಿದೆ. ಈ ಬಂಧನವೇ ಹಾಗೇ ಬೆಲೆ ಕಟ್ಟಲಿಕ್ಕೆ ಆಗದು, ಪರಸ್ಪರ ನಂಬಿಕೆಯೇ ಈ ಬಂಧನದ ಅಡಿಪಾಯ.
ಒಂದು ಕ್ಷಣ ನೋವಿದ್ದರೂ ಸಹಿತ ಮನಸ್ಸಿನಲ್ಲಿ ಇಟ್ಟುಕೊಳ್ಳದೇ, ಅಲ್ಲಿಯೇ ಮರೆತು ಮತ್ತೆ ಮಾತನಾಡುವ, ಮನದ ದುಃಖ ಹೇಳದೆಯೇ ಅರಿಯುವ ಒಂದು ಸ್ನೇಹ ನೂರು ಜನ್ಮ ಮಾಡಿದ ಪುಣ್ಯದ ಫಲವೇ ಆಗಿರುತ್ತದೆ. ನೋವಿನಲ್ಲಿ ಕಣ್ಣೊರೆಸುತ್ತ, ಕೈ ತುತ್ತು ನೀಡುತ್ತಾ, ಪ್ರತಿ ಸಣ್ಣ ಸಮಸ್ಯೆಗೂ ಪರಿಹಾರ ಹುಡುಕುತ್ತಾ,ಜೀವನದ ಪ್ರತಿ ಕ್ಷಣಗಳ ಕುರಿತಂತೆ ಮಾತನಾಡುವ ಜೀವ ನಿಜಕ್ಕೂ ನಮ್ಮ ಜೀವನದಲ್ಲಿ ಇದ್ದರೆ ಅದು ದೇವರು ಕೊಟ್ಟಿರೋ ವರವೇ ಅಂದರೆ ತಪ್ಪಾಗಲಾರದು.
ಸ್ನೇಹವೆಂಬ ಭಾಂಧವ್ಯ ಮುಂಜಾನೆಯ ಎಳೆಯ ಹೊಂಗಿರಣದಂತೆ, ಭರವಸೆಯ ನೆರಳಿನಂತೆ, ಸಾಧನೆಯ ಉತ್ಸಾಹದಂತೆ, ನನ್ನದೆಲ್ಲವೂ ನಮ್ಮದೆನ್ನುವ ನಂಟು. ಬದುಕಿನಲ್ಲಿ ಸಾವಿರ ಗೆಳೆಯ/ಗೆಳತಿಯರು ಇರದಿದ್ದರೂ ಸಹಿತ ಕಷ್ಟದ ಸಮಯದಲ್ಲಿ ಅಪ್ಪುಗೆ ನೀಡಿ ನಾನಿದ್ದೀನಿ ಎಂದು ಭರವಸೆ ನೀಡುತ್ತಾ ಸಮಾಧಾನ ಮಾಡುವ ಒಂದು ಜೀವ ಸಾವಿರ ಗೆಳೆತನಕ್ಕಿಂತ ಮೇಲು.
ಕಾಲಕಳೆದಂತೆ ಪ್ರತಿಯೊಂದು ಬದಲಾಗುತ್ತಿರುವ ಬದುಕಿನಲ್ಲಿ ಬದಲಾಗದೆ ಉಳಿದದ್ದು ಈ ಸ್ನೇಹವೆ. ಪ್ರೀತಿಯ ಜೊತೆಗೆ ಗೌರವ, ಭಾವನೆಗಳ ಜೊತೆಗೆ ಸ್ಪಂದನೆ, ನಂಬಿಕೆಗಳ ಜೊತೆಗೆ ಆತ್ಮವಿಶ್ವಾಸ ತೋರುತ್ತಾ., ನಿನ್ನ ಮುಗ್ದ ಮನಸ್ಸಿನ ಜೊತೆ ನಾನು, ನಿನ್ನ ಸ್ನೇಹಕ್ಕಿಂತ ಮಿಗಿಲಾದ ಉಡುಗೊರೆ ಬೇಕೇನು? ಕೈಯ ಹಿಡಿದು ಹೆಜ್ಜೆ ಬೆಸೆದು ಮುಂದೆ ಮುಂದೆ ನಡೆವ ಎಂದು…
ಪ್ರತಿ ಸ್ನೇಹ ಜೀವಗಳಿಗೆ ಸ್ನೇಹಿತರ ದಿನದ ಶುಭಾಶಯಗಳು..
✍🏻ಟಿ.ಎ. ಹೊಂಬಳ ವಕೀಲರು
ಹುಬ್ಬಳ್ಳಿ.🙏🏻😊