ಕೋಟಿ ಕೋಟಿ ಅಭಿಮಾನಿಗಳನ್ನು ಹೊಂದಿರುವ ಬಾಲಿವುಡ್ ಗಾಯಕ ಅರಿಜಿತ್ ಸಿಂಗ್ ಗಾಯನ ಕ್ಷೇತ್ರಕ್ಕೆ ಫುಲ್ ಸ್ಟಾಪ್ ಹಾಕಿದ ನಿರ್ಧಾರವೇ ಅಚ್ಚರಿ ಮೂಡಿಸಿದ ಬೆನ್ನಲ್ಲೇ, ಇದೀಗ ಇನ್ನೊಂದು ಸಂಚಲನಕಾರಿ ಸುದ್ದಿ ಹೊರಬಿದ್ದಿದೆ. ಅರಿಜಿತ್ ಸಿಂಗ್ ರಾಜಕೀಯ ಪಕ್ಷ ಸ್ಥಾಪಿಸಿ ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಸಕ್ರಿಯ ಪಾತ್ರ ವಹಿಸುವ ಚಿಂತನೆಯಲ್ಲಿದ್ದಾರೆ ಎಂಬ ವರದಿ ಭಾರೀ ಚರ್ಚೆಗೆ ಕಾರಣವಾಗಿದೆ.
ಎನ್‌ಡಿಟಿವಿ ವರದಿ ಪ್ರಕಾರ, ಈ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅರಿಜಿತ್ ಸಿಂಗ್ ಸ್ಪರ್ಧಿಸುವುದಿಲ್ಲ. ಆದರೆ, ರಾಜಕೀಯ ಪಕ್ಷವನ್ನು ಕಟ್ಟಿಬಳೆಸಲು ದೀರ್ಘಾವಧಿಯ ಸಿದ್ಧತೆ ನಡೆಸುವ ಉದ್ದೇಶ ಅವರದ್ದಾಗಿದೆ. ರಾಜಕೀಯ ಕಣಕ್ಕೆ ಇಳಿಯುವುದು ಕೇವಲ ಘೋಷಣೆಯಿಂದ ಸಾಧ್ಯವಲ್ಲ ಎಂಬ ಅರಿವಿನೊಂದಿಗೆ ಅವರು ಮುಂದಿನ ಹೆಜ್ಜೆ ಇಡಲು ಸಜ್ಜಾಗಿದ್ದಾರೆ.
ಭಾರತದಲ್ಲಿ ಸಿನಿಮಾ ಕ್ಷೇತ್ರದ ಅನೇಕರು ರಾಜಕೀಯಕ್ಕೆ ಬಂದಿದ್ದಾರೆ. ಕೆಲವು ಗಾಯಕರು ರಾಜಕೀಯ ಪಕ್ಷಗಳ ಟಿಕೆಟ್ ಪಡೆದು ಸ್ಪರ್ಧಿಸಿದ್ದಾರೆ. ಆದರೆ, ಒಬ್ಬ ಗಾಯಕ ಸ್ವತಂತ್ರವಾಗಿ ಪಕ್ಷ ಸ್ಥಾಪಿಸಿ ರಾಜಕೀಯ ಭೂಮಿಕೆಗೆ ಇಳಿಯಲು ಮುಂದಾಗಿರುವುದು ಅಪರೂಪದ ಬೆಳವಣಿಗೆಯಾಗಿದೆ. ಈ ಕಾರಣದಿಂದಲೇ ಅರಿಜಿತ್ ಸಿಂಗ್ ಅವರ ನಿರ್ಧಾರ ವಿಭಿನ್ನವಾಗಿ ಕಾಣುತ್ತಿದೆ.
ಅರಿಜಿತ್ ಸಿಂಗ್ ಅವರ ವ್ಯಕ್ತಿತ್ವ ಸಂಗೀತಕ್ಕಷ್ಟೇ ಸೀಮಿತವಲ್ಲ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನವರಾದ ಅವರು, ತಮ್ಮ ಊರಿನ ಬಡವರಿಗಾಗಿ ಹಲವು ಸಾಮಾಜಿಕ ಯೋಜನೆಗಳನ್ನು ಕೈಗೊಂಡಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಜನರಿಗಾಗಿ 40 ರೂಪಾಯಿಗೆ ಊಟ ನೀಡುವ ರೆಸ್ಟೋರೆಂಟ್ ಆರಂಭಿಸಿರುವುದು ಅವರ ಮಾನವೀಯ ಮುಖವನ್ನು ತೋರಿಸುತ್ತದೆ.
ಸಾಮಾಜಿಕ ಸೇವೆಯನ್ನು ವ್ಯವಸ್ಥಿತವಾಗಿ ಮತ್ತು ವ್ಯಾಪಕವಾಗಿ ಮುಂದುವರಿಸಲು ರಾಜಕೀಯವೇ ಪರಿಣಾಮಕಾರಿ ಮಾರ್ಗ ಎಂಬ ನಿರ್ಣಯಕ್ಕೆ ಅವರು ಬಂದಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ಕಾರಣಕ್ಕೆ ಸಂಗೀತ ಜಗತ್ತಿನಿಂದ ಹಿಂದೆ ಸರಿದು ಜನಸೇವೆ ಹಾಗೂ ರಾಜಕೀಯದತ್ತ ಅವರು ಮುಖ ಮಾಡಿದ್ದಾರೆ ಎಂಬ ವಿಶ್ಲೇಷಣೆಗಳು ಇದೀಗ ಜೋರಾಗಿವೆ.



