ಬೆಂಗಳೂರು:- ನಾವು ಸೇವಿಸುವ ಹಾಲು, ಮೊಸರು ಸೇರಿದಂತೆ ದಿನಪಯೋಗಿ ಉತ್ಪನ್ನಗಳಲ್ಲಿ ಕಲಬೆರಕೆ ಮತ್ತು ನಕಲಿ ಉತ್ಪನ್ನಗಳ ಸಮಸ್ಯೆ ಹೆಚ್ಚುತ್ತಿರುವುದು ಗ್ರಾಹಕರಿಗೆ ತಲೆನೋವಾಗಿದೆ.
ಈ ನಡುವೆ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ ನಂದಿನಿ ಗ್ರಾಹಕರು ತನ್ನ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಲು ಮುಂದಾಗಿದೆ. ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ತಿಳಿಸಿದ್ದಾರೆ, ಶೀಘ್ರವೇ ನಂದಿನಿ ಉತ್ಪನ್ನಗಳ ಮೇಲೆ QR ಕೋಡ್ ಅಂಟಿಸಲಾಗುವುದು. ಇದರ ಮೂಲಕ ಉತ್ಪನ್ನಗಳ ಮಾಹಿತಿಯನ್ನು ತಕ್ಷಣ ಪರಿಶೀಲಿಸಬಹುದು ಮತ್ತು ಯಾವುದು ಅಸಲಿ, ಯಾವುದು ನಕಲಿ ಎಂಬುದನ್ನು ಗುರುತಿಸಬಹುದು. ಜೊತೆಗೆ ನಕಲಿ ಹಾಗೂ ಕಲಬೆರಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಪ್ರತಿದಿನ ಸರಾಸರಿ 1 ಕೋಟಿ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, 65 ಲಕ್ಷ ಲೀಟರ್ ಹಾಲು, ಮೊಸರು ಮತ್ತು ಇತರ ಉತ್ಪನ್ನಗಳು ಗ್ರಾಹಕರಿಗೆ ತಲುಪುತ್ತಿದೆ. ನಂದಿನಿ ಉತ್ಪನ್ನಗಳು ದುಬೈ, ಸಿಂಗಾಪುರ ಸೇರಿದಂತೆ ವಿದೇಶಗಳಿಗೂ ಮಾರಾಟವಾಗುತ್ತಿದ್ದು, ಮಧುಮೇಹಿಗಳಿಗೆ ಸಕ್ಕರೆ ರಹಿತ ಸಿಹಿ ಉತ್ಪನ್ನಗಳು ಸಹ ಲಭ್ಯವಿರುತ್ತವೆ.
ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ತಿಳಿಸಿದ್ದಾರೆ, ಇತ್ತೀಚೆಗೆ ಹಾಲು ಮತ್ತು ಉತ್ಪನ್ನಗಳ ಬೆಲೆ ಏರಿಕೆ ಪ್ರಸ್ತಾವನೆ ಇಲ್ಲ. ಕಳೆದ ವರ್ಷ 725 ಮೆಟ್ರಿಕ್ ಟನ್ ನಂದಿನಿ ಸಿಹಿ ಉತ್ಪನ್ನ ಮಾರಾಟವಾಗಿದ್ದು, ಈ ಬಾರಿ ಗುರಿಯನ್ನು ಮೀರಿ 1100 ಮೆಟ್ರಿಕ್ ಟನ್ ಮಾರಾಟ ಸಾಧಿಸಿದೆ. ಒಟ್ಟಾರೆ 46 ಕೋಟಿ ರೂ. ವಹಿವಾಟು ದಾಖಲಾಗಿದ್ದು, ಇದು ಕೆಎಂಎಫ್ ಇತಿಹಾಸದಲ್ಲೇ ಅತ್ಯಂತ ಉನ್ನತ ದಾಖಲೆಯಾಗಿದೆ.