ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಶಿಗ್ಲಿ ಗ್ರಾಮದ ನಾಡೋಜ ಡಾ.ಮನು ಬಳಿಗಾರ, ಡಾ. ಎಸ್.ಪಿ. ಬಳಿಗಾರ ಇವರು ತಮ್ಮ ಬಳಿಗಾರ ಕುಟುಂಬದಿಂದ ತಾಯಿ ಶಂಕರಮ್ಮ ಪರಮೇಶ್ವರಪ್ಪ ಬಳಿಗಾರ ಅವರ ಹೆಸರಿನಲ್ಲಿ ಕೊಡಮಾಡಿದ ದತ್ತಿನಿಧಿಯ 5 ಲಕ್ಷ ರೂ ಚೆಕ್‌ನ್ನು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಎಚ್.ಎಲ್. ಪುಷ್ಪಾ ಅವರಿಗೆ ಸಲ್ಲಿಸಲಾಯಿತು.
ಈ ಕುರಿತು ಮಾತನಾಡಿದ ಎಸ್.ಪಿ. ಬಳಿಗಾರ, ಈ ದತ್ತಿನಿಧಿಯಿಂದ ಬರುವ ಬಡ್ಡಿ ಹಣದಲ್ಲಿ ಗದ್ಯ ಸಾಹಿತ್ಯ, ಕಾವ್ಯ ಪ್ರಕಾರ ಮತ್ತು ಸಮಾಜ ಸೇವೆ ಈ ಮೂರು ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಗೆ ಪ್ರಶಸ್ತಿಯನ್ನು ಪ್ರತಿವರ್ಷದ ಕಾರ್ಯಕ್ರಮದ ವೇಳೆ ಕೊಡಲು ಬಳಿಗಾರ ಕುಟುಂಬ ಅಪೇಕ್ಷಿಸಿದೆ. ಅನ್ನ, ಆಶ್ರಯ, ಅಕ್ಷರ ಎಲ್ಲವನ್ನೂ ನೀಡಿ ಸುಂದರ ಬದುಕು ಕಟ್ಟಿಕೊಳ್ಳಲು ಆಸರೆಯಾದ ಕನ್ನಡ ಸಾರಸ್ವತ ಲೋಕಕ್ಕೆ ಅಳಿಲು ಸೇವೆ ಮಾಡಬೇಕೆಂಬ ಉದ್ದೇಶದಿಂದ ಬಳಿಗಾರ ಕುಟುಂಬದಿಂದ ತಾಯಿಯವರ ಹೆಸರಿನಲ್ಲಿ ದತ್ತಿ ನೀಡಲಾಗಿದೆ. ನಾವು ಪಡೆದಿದ್ದರಲ್ಲಿ ಸ್ವಲ್ಪವನ್ನಾದರೂ ಸಮಾಜಕ್ಕೆ ಮರಳಿಸುವ ಮತ್ತು ಸಾಹಿತ್ಯ ಸೇವೆ ಮಾಡುವ ಮನಸ್ಥಿತಿಯನ್ನೂ ತಾಯಿ ಭುವನೇಶ್ವರಿ ನೀಡಿದ್ದಾಳೆ ಎಂದರು.