ನವದೆಹಲಿ:- ಫ್ಯೂಯಲ್ ಕಂಟ್ರೋಲ್ ಸ್ವಿಚ್ (ಇಂಧನ ನಿಯಂತ್ರಣ ಸ್ವಿಚ್) ನಲ್ಲಿ ತಾಂತ್ರಿಕ ದೋಷ ಪತ್ತೆಯಾದ ಹಿನ್ನೆಲೆಯಲ್ಲಿ, ಲಂಡನ್‌ನಿಂದ ಬೆಂಗಳೂರಿಗೆ ಹಾರಾಟ ನಡೆಸಲು ನಿಗದಿಯಾಗಿದ್ದ ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ನಿಗದಿಯಂತೆ AI132 ಸಂಖ್ಯೆಯ ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ ಲಂಡನ್‌ನಿಂದ ಬೆಂಗಳೂರಿಗೆ ಹೊರಡಬೇಕಾಗಿತ್ತು. ಆದರೆ ಹಾರಾಟಕ್ಕೆ ಮುಂಚಿತವಾಗಿ ಪೈಲಟ್‌ಗಳು ಕಡ್ಡಾಯ ಕಾರ್ಯವಿಧಾನ ಪರಿಶೀಲನೆ ನಡೆಸುವ ವೇಳೆ ಫ್ಯೂಯಲ್ ಕಂಟ್ರೋಲ್ ಸ್ವಿಚ್‌ನಲ್ಲಿ ದೋಷ ಕಂಡುಬಂದಿದೆ. ಈ ಬಗ್ಗೆ ಪೈಲಟ್‌ಗಳು ತಕ್ಷಣವೇ ವಿಮಾನಯಾನ ಸಂಸ್ಥೆಗೆ ವರದಿ ಮಾಡಿದರು.
ಪೈಲಟ್‌ಗಳ ವರದಿ ಸ್ವೀಕರಿಸಿದ ತಕ್ಷಣವೇ ಎಚ್ಚೆತ್ತ ಏರ್ ಇಂಡಿಯಾ, ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿಮಾನ ಹಾರಾಟವನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿತು. ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಏರ್ ಇಂಡಿಯಾ, “ನಮ್ಮ ಪೈಲಟ್‌ಗಳಲ್ಲಿ ಒಬ್ಬರು ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ ದೋಷವಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಪೈಲಟ್‌ಗಳ ಕಾಳಜಿಗಳಿಗೆ ಆದ್ಯತೆ ನೀಡಿ ಪರಿಶೀಲನೆ ನಡೆಸಲು OEM (ವಿಮಾನ ಬಿಡಿಭಾಗ ತಯಾರಿಕಾ ಸಂಸ್ಥೆ) ಜೊತೆ ಸಮನ್ವಯ ಮಾಡಿಕೊಳ್ಳಲಾಗುತ್ತಿದೆ” ಎಂದು ತಿಳಿಸಿದೆ.
ಇದಲ್ಲದೆ, ಈ ವಿಷಯವನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA)ದ ಗಮನಕ್ಕೂ ತರಲಾಗಿದೆ. ವಿಮಾನ ತಯಾರಕರೊಂದಿಗೆ ಸೇರಿ ಹೆಚ್ಚಿನ ತಾಂತ್ರಿಕ ಪರಿಶೀಲನೆಗಳು ನಡೆಯುತ್ತಿವೆ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ.



