ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬಂಗಾರಕ್ಕೆ ಇಂದು ಹೆಚ್ಚಿನ ಬೆಲೆ ಇದೆ. ಆದರೆ ಜನರು ತಿನ್ನುವ ಅನ್ನಕ್ಕೆ ಬಂಗಾರಕ್ಕಿಂತಲೂ ಅಧಿಕ ಬೆಲೆ ಬಂದಿರುವುದು ವಾಸ್ತವ. ಅನ್ನವಿಲ್ಲದೆ ಯಾರೂ ಬದುಕಲು ಸಾಧ್ಯವಿಲ್ಲ. ಆದರೂ ಅನ್ನವನ್ನು ಬೆಳೆಸುವ ರೈತನಿಗೆ ಅವನ ಬೆಳೆಗೆ ಸರಿಯಾದ ಬೆಲೆ ಸಿಗದೆ ಹೀನಾಯ ಪರಿಸ್ಥಿತಿ ಎದುರಾಗಿರುವುದು ಅತ್ಯಂತ ದುಃಖದ ಸಂಗತಿ ಎಂದು ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನ ಮಠದ ಜಗದ್ಗುರು ಫಕೀರ ಸಿದ್ಧರಾಮ ಮಹಾಸ್ವಾಮಿಗಳು ವಿಷಾದ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಸಮಗ್ರ ರೈತಪರ ಸಂಘಟನೆಗಳ ಸಹಯೋಗದಲ್ಲಿ ನಡೆಯುತ್ತಿದ್ದ 8ನೇ ದಿನದ ಅಹೋರಾತ್ರಿ ಹೋರಾಟ ವೇದಿಕೆಗೆ ಆಗಮಿಸಿ ಮಾತನಾಡಿದ ಅವರು, “ಬೆಳೆ ಚೆನ್ನಾಗಿ ಬಂದಾಗ ಬೆಲೆ ಇರುವುದಿಲ್ಲ, ಬೆಳೆ ಬರದಿದ್ದಾಗ ಮಾತ್ರ ಬೆಲೆ ಏರುತ್ತದೆ. ಅನ್ನವನ್ನು ಸೃಷ್ಟಿಸುವ ಶಕ್ತಿ ರೈತನಿಗೆ ಇದೆ. ಇಂತಹ ರೈತರ ಹೋರಾಟಕ್ಕೆ ನಮಗೆ ಸಂಪೂರ್ಣ ಬೆಂಬಲವಿದೆ. ಸರ್ಕಾರ ಖರೀದಿ ಕೇಂದ್ರ ಆರಂಭಿಸುವುದಾಗಿ ಹೇಳಿರುವುದು ಸ್ತುತ್ಯಾರ್ಹ, ಅದು ಆದಷ್ಟು ಬೇಗ ಜಾರಿಗೊಳ್ಳಲಿ” ಎಂದು ಆಶಿಸಿದರು.



