ವಿಜಯಸಾಕ್ಷಿ ಸುದ್ದಿ, ಗದಗ: ನಗರದ ವಿದ್ಯಾದಾನ ಸಮಿತಿಯ ಶ್ರೀಮತಿ ಎಂ.ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ `ಫನ್ ವೀಕ್’ನ ಮೂರನೇ ದಿನ ಟ್ವಿನ್ಸ್ ಡೇ ಆಚರಿಸಲಾಯಿತು.
ಪ್ರಶಿಕ್ಷಣಾರ್ಥಿಗಳು ಅವಳಿ-ಜವಳಿ ಮಕ್ಕಳಂತೆ ಉಡುಗೆಗಳನ್ನು ಧರಿಸಿದ್ದು ಆಕರ್ಷಣಿಯವಾಗಿತ್ತು. ಬೆಂಕಿಯ ಸಹಾಯವಿಲ್ಲದೆ ಅಡುಗೆ ಮಾಡುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿ ಹಲವಾರು ಬಗೆಯ ರುಚಿಕರವಾದ ಖಾದ್ಯಗಳನ್ನು ತಯಾರಿಸಿದರು.
ವಿದ್ಯಾದಾನ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಗಂಗೂಬಾಯಿ ಪವಾರ ಪ್ರಶಿಕ್ಷಣಾರ್ಥಿಗಳು ತಯಾರಿಸಿದ್ದ ಖಾದ್ಯಗಳನ್ನು ಸವಿದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅತಿಥಿಗಳಾಗಿ ಆಗಮಿಸಿದ್ದ ಇಸ್ರೋದ ವಿಶ್ರಾಂತ ವಿಜ್ಞಾನಿ, ವಿದ್ಯಾದಾನ ಸಮಿತಿಯ ಹಳೆ ವಿದ್ಯಾರ್ಥಿ ಸುಧೀಂದ್ರ ಬಿಂದಗಿ ಪ್ರಶಿಕ್ಷಣಾರ್ಥಿಗಳಲ್ಲಿರುವ ಕ್ರಿಯಾಶೀಲತೆಯನ್ನು ಮೆಚ್ಚಿ ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಹಿರಿಯ ಉಪನ್ಯಾಸಕರಾದ ವಿ.ಪಿ. ಪಾಟೀಲ, ಎನ್.ಜಿ. ಚನ್ನಪ್ಪಗೌಡರ, ಎಸ್.ವೈ. ಕಠಾರಿ, ಎಸ್.ಎಲ್. ಹೊಸಳ್ಳಿ ಹಾಗೂ ಎಲ್ಲಾ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.