ವಿಜಯಸಾಕ್ಷಿ ಸುದ್ದಿ, ಗದಗ : ವಿದ್ಯಾರ್ಥಿಗಳು ಆತ್ಮವಿಶ್ವಾಸ ಹಾಗೂ ಸತತ ಪರಿಶ್ರಮಗಳಿಂದ ಉತ್ತಮ ಶಿಕ್ಷಣ ಪಡೆಯಬೇಕು. ಶಿಕ್ಷಣ ಪಯಣದಲ್ಲಿ ಸದಾ ಯಶಸ್ಸು ದೊರೆಯುವುದಿಲ್ಲ. ನಿರಾಸೆಗೊಳ್ಳದೇ ಮರಳಿ ಛಲದಿಂದ ಪ್ರಯತ್ನ ಪಡುವುದರೊಂದಿಗೆ ಬಯಸಿದ ಪರಿಣಾಮ ಪಡೆಯಬಹುದು. ಸಾಧಕರಿಗೆ ಅನೇಕಾನೇಕ ಅವಕಾಶಗಳು ಬಂದೊದಗುತ್ತವೆ. ಅವುಗಳ ಸದುಪಯೋಗ ಪಡೆದುಕೊಂಡು ನಮ್ಮ ಗುರಿಯನ್ನು ತಲುಪಬೇಕು ಎಂದು ನಿವೃತ್ತ ಪ್ರಾಚಾರ್ಯ ಬಿ.ಎಸ್. ಮಾನೇದ ಅಭಿಪ್ರಾಯಪಟ್ಟರು.
ಅವರು ಸ್ಥಳೀಯ ಜಿ.ಸಿ.ಟಿ.ಎಂ. ಪದವಿ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶೈಕ್ಷಣಿಕ ಸಲಹಾ ಸಮಿತಿ ಚೇರಮನ್ ದತ್ತಪ್ರಸಾದ ಓದುಗೌಡ್ರ ಮಾತನಾಡುತ್ತ, ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಹಾಗೂ ಆಸಕ್ತಿಗೆ ಅನುಗುಣವಾಗಿ ವಿಷಯ ಆಯ್ದುಕೊಳ್ಳಬೇಕು. ಧೈರ್ಯ ಹಾಗೂ ದೃಢ ಸಂಕಲ್ಪದೊಂದಿಗೆ ಅಧ್ಯಯನ ಕೈಗೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಪ್ರಾಮಾಣಿಕ ಹಾಗೂ ಜವಾಬ್ದಾರಿಯಿಂದ ಅಧ್ಯಯನ ಕೈಗೊಂಡರೆ ಉತ್ತಮ ಫಲಿತಾಂಶ ದೊರಕಲಿದೆ ಎಂದು ಅಭಿಪ್ರಾಯಪಟ್ಟರು.
2024ನೇ ಮಾರ್ಚ ತಿಂಗಳಲ್ಲಿ ಜರುಗಿದ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಪ್ರಥಮ ವರ್ಷದ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರದೊಂದಿಗೆ ಸತ್ಕರಿಸಲಾಯಿತು. ಪ್ರತಿಭಾನ್ವಿತರ ಪರವಾಗಿ ಮಾಬುಬಿ ಭದ್ರಾಪೂರ ಹಾಗೂ ಮಹದೇವಪ್ಪ ಹೆಬ್ಬಳ್ಳಿ ಮಾತನಾದರು.
ಸಹನಾ ನದಾಫ್ ಸ್ವಾಗತ ಕೋರಿದರು. ರೂಪಾ ಪೂಜಾರ ಪರಿಚಯಿಸಿದರು. ಶಂಕ್ರಮ್ಮ ಬೆಳ್ಳೇರಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದರು. ನೂತನವಾಗಿ ಆಯ್ಕೆಗೊಂಡ ಕಾಲೇಜು ಸಂಸತ್ತು ಸದಸ್ಯರಿಗೆ ಬಿ.ಎಸ್. ಮಾನೇದ ಗುರುಗಳು ಪ್ರಮಾಣವಚನ ಬೋಧಿಸಿದರು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಪ್ರೊ. ಶಾರದಾ ದುಂದೂರ ನಡೆಸಿಕೊಟ್ಟರು. ಶಶಿಕಲಾ ಗಂಜರಿ, ಮೇಘಾ ಗೋಣಬಾಯಿ ಕಾರ್ಯಕ್ರಮ ನಿರೂಪಿಸಿದರು.ವಿಜಯಲಕ್ಷ್ಮಿ ಚನ್ನಪ್ಪಗೌಡರ ವಂದಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಎ. ದೇಶಪಾಂಡೆ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಗಳು ಉತ್ತಮ ನಡತೆ, ಬಾಂಧವ್ಯ ಹಾಗೂ ಜೀವನದ ಮೌಲ್ಯಗಳನ್ನು ಬೋಧಿಸುತ್ತವೆ. ಕ್ರೀಡಾ ಚಟುವಟಿಕೆಗಳು ಸಹಕಾರ, ಸಹಬಾಳ್ವೆ, ಸಂಘಶಕ್ತಿ ಹಾಗೂ ಸದೃಢ ದೇಹ ಒದಗಿಸುತ್ತವೆ. ಕಾಲೇಜಿನಲ್ಲಿ ವರ್ಷದುದ್ದಕ್ಕೂ ನಡೆಯುವ ಈ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಸಹಾಯಕಾರಿಯಾಗಿರುತ್ತವೆ. ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂಸ್ಥೆಗೆ ಕೀರ್ತಿ ತರಬೇಕೆಂದು ಕರೆಯಿತ್ತರು.
Advertisement