ವಿಜಯಸಾಕ್ಷಿ ಸುದ್ದಿ, ಧಾರವಾಡ: ಇಲ್ಲಿನ ಕುಂದಗೋಳ ತಾಲೂಕಿನ ಹಿರೇನರ್ತಿ ಮತ್ತು ಯರಗುಪ್ಪಿ ಗ್ರಾಮ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಭುವನೇಶ ಪಾಟೀಲ ಭೇಟಿ ನೀಡಿ, ಯರಗುಪ್ಪಿ-ರೊಟ್ಟಿಗವಾಡ ರಸ್ತೆಯ ಶಂಕರ ಗೌಡ ಪಾಟೀಲ ಇವರ ಜಮೀನಿಂದ ದ್ಯಾವಪ್ಪ ಹೊಸಮನಿ ಇವರ ಜಮೀನಿನವರೆಗೆ ಕಾಲುವೆ ಹೂಳೆತ್ತುವ ಕಾಮಗಾರಿ ಪರಿಶೀಲಿಸಿ, ಸ್ಥಳದಲ್ಲಿದ್ದ ಕೂಲಿ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು.
ನಂತರ ಹಿರೇನರ್ತಿ ಗ್ರಾಮದ ರಾಮನ ಗೌಡ್ರು ಬಳಗಲಿ ಇವರ ಜಮೀನಿನ ಹತ್ತಿರ ಕಾಲುವೆ ನಿರ್ಮಾಣ ಕಾಮಗಾರಿಯನ್ನು ಪರಿವೀಕ್ಷಣೆ ಮಾಡಿ, ಕೂಲಿ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಪಂಚಾಯತ ಸಭಾಭವನದಲ್ಲಿ ಪ್ರಗತಿ ಪರಿಶೀಲನೆ ಸಭೆ ಜರುಗಿಸಿ, 2024-25ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅತೀ ಕಡಿಮೆ ಸಾಧನೆ ಮಾಡಿರುವ ಪಂಚಾಯಿತಿಯ ಗ್ರಾಮ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುವ ಟಿಇಎ ಅವರಿಗೆ ಕಾಲಮಿತಿಯಲ್ಲಿ ಅನುಮೋದಿತ ಕ್ರಿಯಾಯೋಜನೆಯ ಅನುಸಾರ ಕಾಮಗಾರಿಗಳನ್ನು ಕೈಗೊಂಡು ಪೂರ್ಣ ಪ್ರಮಾಣದ ಗುರಿ ಸಾಧಿಸಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಉದ್ಯೋಗ ಖಾತ್ರಿಯೋಜನೆಯ ಸಹಾಯಕ ನಿರ್ದೇಶಕರು ಹಾಗೂ ವಿವಿಧ ಗ್ರಾ.ಪಂ ಅಧ್ಯಕ್ಷರು, ಗ್ರಾಮ ಅಭಿವೃದ್ಧಿ ಅಧಿಕಾರಿ, ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸುವ ಟಿಇಎ, ಟಿಸಿ, ಟಿಐಇಸಿ ಹಾಗೂ ಬಿಎಫ್ಟಿ ಸಿಬ್ಬಂದಿಗಳು ಉಪಸ್ಥಿತರಿದ್ದರು.