ವಿಜಯಸಾಕ್ಷಿ ಸುದ್ದಿ, ಧಾರವಾಡ: ಕುಂದಗೋಳ ತಾಲೂಕಿನ ಹೀರೆಹರಕುಣಿ, ಮುತ್ತಿಗಟ್ಟಿ, ರಾಮನಕೊಪ್ಪ ಗ್ರಾಮ ಪಂಚಾಯಿತಿಗಳಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ್ ಪಾಟೀಲ್ ಭೇಟಿ ನೀಡಿ, ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ಮನೆಗಳಿಗೆ ಒದಗಿಸಲಾದ ನೀರಿನ ಕೊಳವೆ ಸಂಪರ್ಕಗಳ ಗುಣಮಟ್ಟ, ನೀರಿನ ಮೀಟಟ್‌ಗಳ ಸ್ಥಾಪನೆ, ನೀರು ಸರಬರಾಜಿನ ಸ್ಥಿರತೆ ಮತ್ತು ಫೀಲ್ಡ್ ಟೆಸ್ಟ್ ಕಿಟ್‌ಗಳ ಮೂಲಕ ನೀರಿನ ಗುಣಮಟ್ಟ ಪರೀಕ್ಷೆಯಂತಹ ಅಂಶಗಳನ್ನು ಪರಿಶೀಲಿಸಿದರು.
ಬಳಿಕ ಮುತ್ತಿಗಟ್ಟಿ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಭೇಟಿ ನೀಡಿ, ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಸವಿದರು. ಅಡುಗೆ ಸಿಬ್ಬಂದಿಗಳು ಸ್ವಚ್ಛತೆ ಕಾಪಾಡಬೇಕು. ಕೂಸಿನ ಮನೆಗಳಲ್ಲಿ ಕಡ್ಡಾಯವಾಗಿ ಮಕ್ಕಳಿಗೆ ಮೂಲ ಸೌಕರ್ಯ ಇರುವಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವ ಕುರಿತು ಸಂಬಂಧಿಸಿದವರು ನಿಗಾ ವಹಿಸಬೇಕು ಎಂದು ಸೂಚಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಜಗದೀಶ್, ಕುಂದಗೋಳ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್, ಸಹಾಯಕ ನಿರ್ದೇಶಕರು, ಅಭಿಯಂತರರು, ಶಿಕ್ಷಕರು, ಗ್ರಾ.ಪಂ ಚುನಾಯಿತ ಪ್ರತಿನಿಧಿಗಳು, ಪಿಡಿಒ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.


