ಗದಗ: ಗೆಳೆಯನ ಜೊತೆಗೆ ಊಟಕ್ಕೆ ಕುಳಿತಿದ್ದ ಯುವಕನ ಮೇಲೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ ಘಟನೆ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ನರಗುಂದ ಪಟ್ಟಣದ ಕಸಬಾ ಓಣಿಯ ಬಸವರಾಜ್ ಮಮಟಗೇರಿ (22) ಕೊಲೆಗೀಡಾದ ಯುವಕ. ನರಗುಂದ ಪಟ್ಟಣದ ಸವದತ್ತಿ ರಸ್ತೆಯಲ್ಲಿ ಇರುವ ನ್ಯೂ ತಾಜ್ ಹೋಟೆಲ್ ನಲ್ಲಿ ಗೆಳೆಯನ ಜೊತೆಗೆ ಬಸವರಾಜ್ ಊಟಕ್ಕೆ ಕುಳಿತಿದ್ದ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು, ಹೊಟೇಲ್ ಒಳಗೆ ನುಗ್ಗಿ ಬಸವರಾಜ್ ಜೊತೆ ಜಗಳ ತಗೆದು ಕತ್ತು, ತಲೆ ಹಾಗೂ ಹಣೆಗೆ ಮಚ್ಚಿನಿಂದ ಹೊಡೆದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊಲೆಯ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಕುಟುಂಬಸ್ಥರ ಆಕ್ರಂಧನ ಮುಗಿಲ ಮುಟ್ಟಿದೆ.
ಯಾವ ಕಾರಣಕ್ಕಾಗಿ ಈ ಕೊಲೆ ನಡೆದಿದೆ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.