ಗದಗ: ಏರ್ ಫ್ರೆಶ್ನರ್ ಬಾಟಲ್ ಸ್ಫೋಟಗೊಂಡ ಕಾರಣ ಅಪ್ರಾಪ್ತ ಬಾಲಕಿಯೊಬ್ಬಳ ಮುಖಕ್ಕೆ ಗಂಭೀರ ಗಾಯಗಳಾಗಿರುವ ಘಟನೆ ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮನೆ ಪಕ್ಕದಲ್ಲಿ ಬೆಂಕಿ ಹಚ್ಚಿದ ವೇಳೆ ಏರ್ ಫ್ರೆಶ್ನರ್ ಬಾಟಲ್ ಸ್ಫೋಟಗೊಂಡು ಈ ಘಟನೆ ಜರುಗಿದೆ.
ಸ್ಫೋಟದಿಂದ ಗಾಯಗೊಂಡ ಬಾಲಕಿಯನ್ನು ತಕ್ಷಣ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಸಂಬಂಧ ಬಾಲಕಿಯ ತಾಯಿ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಮಗಳನ್ನು ಚುಡಾಯಿಸುತ್ತಿದ್ದ ಅಲ್ತಾಪ್ ಎಂಬ ಯುವಕನೇ ಉದ್ದೇಶಪೂರ್ವಕವಾಗಿ ಏರ್ ಫ್ರೆಶ್ನರ್ ಬಾಟಲ್ ಸ್ಫೋಟ ಮಾಡಿದ್ದಾನೆ ಎಂದು ದೂರಿದ್ದಾರೆ. ಈ ಹಿಂದೆ ಕೂಡ ಎರಡು ಕುಟುಂಬಗಳ ನಡುವೆ ಗಲಾಟೆಗಳು ನಡೆದಿದ್ದವು ಎಂದು ಸ್ಥಳೀಯರು ಹೇಳಿದ್ದಾರೆ.
ಘಟನೆಯ ಮಾಹಿತಿ ಪಡೆದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಮಾತನಾಡಿದ ಅವರು, ಮನೆ ಸಮೀಪ ಬೆಂಕಿ ಹಚ್ಚಿದಾಗ ಏರ್ ಫ್ರೆಶ್ನರ್ ಬಾಟಲ್ ಸ್ಫೋಟಗೊಂಡು ಬಾಲಕಿಗೆ ಗಾಯವಾಗಿದೆ. ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಪ್ರಕರಣದಲ್ಲಿ ಚುಡಾಯಿಸಿದ್ದಾನೆ ಎನ್ನಲಾದ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ರೋಹನ್ ಜಗದೀಶ್ ತಿಳಿಸಿದ್ದಾರೆ.



