ಗದಗ-ಬೆಟಗೇರಿ ನಗರಸಭೆಯ `ಆಯವ್ಯಯ ವಿಶೇಷ ಸಭೆ’

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರಸಭೆ ಸಭಾಭವನದಲ್ಲಿ ನಗರಸಭೆಯ ಆಯವ್ಯಯ ವಿಶೇಷ ಸಭೆಯು ಗದಗ-ಬೆಟಗೇರಿ ನಗರಸಭೆಯ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಸಿ.ಎನ್. ಶ್ರೀಧರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

Advertisement

ಸಭೆಯಲ್ಲಿ ನಗರಸಭೆಯ ಪೌರಾಯುಕ್ತರಾದ ರಾಜಾರಾಮ್ ಪವಾರ್ ಅವರು 2025-2026ನೇ ಸಾಲಿನ ಆಯವ್ಯಯವನ್ನು ಮಂಡಿಸಿದರೆ, ಜಿಲ್ಲಾಧಿಕಾರಿ ಹಾಗೂ ಗದಗ-ಬೆಟಗೇರಿ ನಗರಸಭೆ ಆಡಳಿತಾಧಿಕಾರಿ ಸಿ.ಎನ್. ಶ್ರೀಧರ್ ಅವರು 2025-26 ನೇ ಸಾಲಿನ ಆಯವ್ಯಯಕ್ಕೆ ಅನುಮೋದನೆ ನೀಡಿದರು.

ಮಿಗತೆಯ ಅಂದಾಜು ಆಯವ್ಯಯ: 2025-26ನೇ ಸಾಲಿನಲ್ಲಿ ರಾಜಸ್ವ ಖಾತೆಯಲ್ಲಿ ರೂ. 6763.23 ಲಕ್ಷ, ಬಂಡವಾಳ ಖಾತೆಯಲ್ಲಿ ರೂ. 2501.69 ಲಕ್ಷ ಹಾಗೂ ಅಸಾಧಾರಣ ಖಾತೆಯಲ್ಲಿ ರೂ. 2495.58 ಲಕ್ಷಗಳನ್ನು ಒಟ್ಟು ರೂ. 11760.50 ಲಕ್ಷಗಳ ಸ್ವೀಕೃತಿಯನ್ನು ನಿರೀಕ್ಷಿಸಲಾಗಿದೆ.

ರಾಜಸ್ವ ಖಾತೆಯಲ್ಲಿ ರೂ. 7822.31 ಲಕ್ಷಗಳ ರಾಜಸ್ವ ವೆಚ್ಚವನ್ನು, ಬಂಡವಾಳ ಖಾತೆಯಲ್ಲಿ ಆಸ್ತಿ ನಿರ್ಮಾಣಕ್ಕಾಗಿ ರೂ. 4720.97 ಲಕ್ಷಗಳನ್ನು ವೆಚ್ಚಕ್ಕಾಗಿ ಮೀಸಲಿರಿಸಿ, ಅಸಾಧಾರಣ ಖಾತೆಯಲ್ಲಿ ರೂ. 2995.19 ಲಕ್ಷಗಳ ಅಸಾಧಾರಣ ಆದಾಯವನ್ನು ನಿರೀಕ್ಷಿಸಿ ಒಟ್ಟಾರೆಯಾಗಿ ರೂ. 15538.47 ಲಕ್ಷಗಳ ವೆಚ್ಚವನ್ನು ನಿರೀಕ್ಷಿಸಿ, ರೂ. 3777.97 ಲಕ್ಷಗಳ ಕೊರತೆಯನ್ನು ಅಂದಾಜಿಸಿದೆ. ಈ ಕೊರತೆಯನ್ನು ರೂ. 4224.94 ಲಕ್ಷಗಳ ಆರಂಭಿಕ ಶಿಲ್ಕುದಿಂದ ಸರಿದೂಗಿಸಿ ಒಟ್ಟಾರೆಯಾಗಿ ರೂ. 446.97 ಲಕ್ಷಗಳ ಉಳಿತಾಯ/ಮಿಗತೆಯ ಅಂದಾಜನ್ನು ಮಂಡಿಸಿದೆ.

ಸ್ವೀಕೃತಿ/ಆದಾಯ: ಆಯ-ವ್ಯಯದಲ್ಲಿ ನಗರಸಭೆಗೆ ಆಸ್ತಿ ತೆರಿಗೆಯಿಂದ ಶೇ 21ರಷ್ಟು, ವಹಿಸಿದ ಸ್ವೀಕೃತಿಯಿಂದ ಶೇ 1ರಷ್ಟು, ಮಳಿಗೆಗಳ ಬಾಡಿಗೆಯಿಂದ ಶೇ 1ರಷ್ಟು, ಫೀ ಹಾಗೂ ಬಳಕೆ ವೆಚ್ಚದಿಂದ ಶೇ 15ರಷ್ಟು ಹಾಗೂ ರಾಜ್ಯ/ಕೇಂದ್ರ ಸರ್ಕಾರದ ಅನುದಾನ/ವಂತಿಕೆಗಳಿAದ ಶೇ 62ರಷ್ಟು ಆದಾಯ ಬರಬಹುದೆಂದು ಅಂದಾಜಿಸಲಾಗಿದೆ.

ಅಭಿವೃದ್ದಿ ಶುಲ್ಕದಿಂದ ರೂ. 100 ಲಕ್ಷ, ಕಟ್ಟಡ ಅನುಮತಿ ಶುಲ್ಕದಿಂದ ರೂ. 60 ಲಕ್ಷ, ವಾಣಿಜ್ಯ ಸಂಕೀರ್ಣಗಳ ಬಾಡಿಗೆಯಿಂದ ರೂ. 65 ಲಕ್ಷ, ಅಂಗಡಿಗಳ ಲೈಸನ್ಸ್ನಿಂದ ರೂ. 65 ಲಕ್ಷ, ಖಾತಾ ನಕಲು ಶುಲ್ಕದಿಂದ ರೂ. 16 ಲಕ್ಷ, ಖಾತಾ ಬದಲಾವಣೆಯಿಂದ ರೂ. 110 ಲಕ್ಷ, ಘನತಾಜ್ಯ ನಿರ್ವಹಣೆ ಶುಲ್ಕದಿಂದ ರೂ. 65 ಲಕ್ಷ, ಒಳಚರಂಡಿ ಬಳಕೆದಾರರ ಫೀ ರೂ. 10 ಲಕ್ಷ ಹಾಗೂ ನೀರು ಸರಬರಾಜು ಫೀಯಿಂದ ರೂ. 250 ಲಕ್ಷಗಳ ಆದಾಯವನ್ನು ಅಂದಾಜಿಸಿದೆ. ಪ್ರಸ್ತುತ ಸುಮಾರು ರೂ. 1300 ಲಕ್ಷಗಳಿರುವ ಆಸ್ತಿ ತೆರಿಗೆಯನ್ನು ರೂ. 1400 ಲಕ್ಷಗಳಿಗೆ ಹೆಚ್ಚಿಸಿ ಕಂದಾಯ ವಸೂಲಾತಿಯ ಸಾಮರ್ಥ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.

ನಗರಸಭೆಯ ಆಡಳಿತ: 2025-26ನೇ ಸಾಲಿನಲ್ಲಿ ಪೌರಕಾರ್ಮಿಕರ ಬೆಳಗಿನ ಉಪಹಾರದ ವ್ಯವಸ್ಥೆ ರೂ. 61 ಲಕ್ಷಗಳನ್ನು ಅವರ ಅಭ್ಯದಯ ವೆಚ್ಚಕ್ಕಾಗಿ ಮೀಸಲಿರಿಸಲಾಗಿದೆ. ಪ್ರಿಂಟಿಂಗ್ ಮತ್ತು ಸ್ಟೇಶನರಿಗಾಗಿ ರೂ. 22.25 ಲಕ್ಷಗಳನ್ನು, ಆಡಳಿತ ಮಂಡಳಿಯ ಗೌರವಧನ ಇತ್ಯಾದಿಗಳಿಗಾಗಿ ರೂ. 49.07 ಲಕ್ಷ, ವಾಹನಗಳ ದುರಸ್ಥಿಗಾಗಿ ರೂ. 65 ಲಕ್ಷ ಹಾಗೂ ವಾಹನಗಳ ವಿಮೆಗಾಗಿ ರೂ. 20 ಲಕ್ಷ, ಸಮಾಲೋಚನ ವೆಚ್ಚಕ್ಕಾಗಿ ರೂ. 17.50 ಲಕ್ಷ, ಜಾಹೀರಾತು ಹಾಗೂ ಪ್ರಚಾರಕ್ಕಾಗಿ ರೂ. 26.60 ಲಕ್ಷ, ಸಂಪರ್ಕ ವೆಚ್ಚಕ್ಕಾಗಿ ರೂ 3.50 ಲಕ್ಷ ಹೀಗೆ ಸಾಮಾನ್ಯ ಆಡಳಿತಕ್ಕಾಗಿ ರೂ. 1557.95 ಲಕ್ಷಗಳನ್ನು ಮೀಸಲಿಸಿ ಕಾಯ್ದಿರಿಸಿದೆ.

ರಸ್ತೆ ಹಾಗೂ ಚರಂಡಿ: ರಸ್ತೆ ರಿಪೇರಿಗಾಗಿ ರೂ. 80.00 ಲಕ್ಷಗಳನ್ನು ಹಾಗೂ ಹೊಸ ರಸ್ತೆಗಳ ನಿರ್ಮಾಣಕ್ಕಾಗಿ ರೂ. 1001.96 ಲಕ್ಷಗಳನ್ನು ಹಾಗೂ ತ್ಯಾಜ್ಯ ನೀರು ಹರಿಯಲು ಚರಂಡಿ ನಿರ್ವಹಣೆಗೆ ರೂ. 109.50 ಲಕ್ಷಗಳನ್ನು ಹಾಗೂ ಹೊಸ ಚರಂಡಿ ನಿರ್ಮಾಣ ಮಾಡುವ ಕಾರ್ಯಕ್ರಮಕ್ಕಾಗಿ ರೂ. 265.18 ಲಕ್ಷಗಳ ಗುರಿ ಹೊಂದಲಾಗಿದೆ.

ಬೀದಿ ದೀಪ: ನಗರದ ಬೀದಿದೀಪದ ನಿರ್ವಹಣೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಿ ಹೊರಗುತ್ತಿಗೆ ನೀಡಲು ಈ ವರ್ಷ ರೂ. 1.35 ಕೋಟಿಗಳನ್ನು ಮೀಸಲಿರಿಸಿದ್ದು ಹಾಗೂ ಹೊಸ ಬಡಾವಣೆಗಳಿಗೆ ಬೀದಿದೀಪದ ವ್ಯವಸ್ಥೆಯನ್ನು ವಿಸ್ತರಿಸುವ ಹಾಗೂ ವಿವಿಧ ಸ್ಥಳಗಳಲ್ಲಿ ಹಾಕುವ ಕಾರ್ಯಕ್ರಮವನ್ನು ಮುಂದುವರೆಸಲಾಗಿದ್ದು, ಅದಕ್ಕಾಗಿ ಈ ವರ್ಷ ರೂ. 1.14 ಕೋಟಿಗಳನ್ನು ಮೀಸಲಿರಿಸಿ ನಗರದ ಎಲ್ಲ ಬಡಾವಣೆ, ಓಣಿ, ಹಾಗೂ ವಿವಿಧ ಸ್ಥಳಗಳಲ್ಲಿ ವಿದ್ಯುತ್-ದೀಪಗಳನ್ನು ಬೆಳಗಿಸುವ ಕಾರ್ಯಕ್ರಮ ಮುಂದುವರಿಸಿದೆ.

ಆರೋಗ್ಯ ಮತ್ತು ನೈರ್ಮಲ್ಯ: ಪಟ್ಟಣದ ನೈರ್ಮಲ್ಯ ಹಾಗೂ ಆರೋಗ್ಯ ಕಾಯ್ದುಕೊಂಡು, ಶುದ್ದ ಕುಡಿಯುವ ನೀರು ಒದಗಿಸಿ ನಗರವಾಸಿಗಳ ಆರೋಗ್ಯ ಸ್ಥಿತಿ ಸುಧಾರಿಸುವ ಕಾರ್ಯಕ್ರಮಕ್ಕಾಗಿ ಈ ಪ್ರಸಕ್ತ ವರ್ಷ ರೂ. 1522.17 ಲಕ್ಷಗಳನ್ನು ಈ ಮುಂಗಡ ಪತ್ರದಲ್ಲಿ ವೆಚ್ಚಕ್ಕಾಗಿ ಪ್ರಸ್ತಾವನೆ ಮಾಡಿಕೊಳ್ಳಲಾಗಿದೆ.

15 ನೇ ಹಣಕಾಸಿನಡಿ ಹೆಚ್ಚುವರಿಯಾಗಿ (ನಾನ್ ಮಿಲಿಯನಿಯಮ್ ಪ್ಲಸ್ ಸಿಟೀಸ್ ) ಅನುದಾನದಡಿ ರೂ. 308.00 ಲಕ್ಷಗಳು ಬಿಡುಗಡೆಯಾಗಿದ್ದು, ಅದನ್ನು ಪೂರ್ಣವಾಗಿ ಸರ್ಕಾರದ ಸುತ್ತೋಲೆಯಂತೆ ನೀರು ಸರಬರಾಜು ಹಾಗೂ ಘನತ್ಯಾಜ್ಯ ವಸ್ತು ನಿರ್ವಹಣೆಗಾಗಿ ಬಳಸಿಕೊಳ್ಳಲು ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.

ಹೊರಗುತ್ತಿಗೆ ಪೌರಕಾರ್ಮಿಕರು/ಲೋಡರ್ಸಗಳು ಹಾಗೂ ಮನೆ ಮನೆ ಕಸ ಸಂಗ್ರಹಿಸುವ ಕಾರ್ಮಿಕ ಸಿಬ್ಬಂದಿಗಳ ಸಂಭಾವನೆಗಾಗಿ ಪ್ರಸಕ್ತ ವರ್ಷ ರೂ. 560.00 ಲಕ್ಷಗಳನ್ನು ಮೀಸಲಿಡಲಾಗಿದೆ. ಹಾಗೂ ಅವರ ಆರೋಗ್ಯ ಸಂರಕ್ಷಣಾ ಸಾಮಾನುಗಳನ್ನು ಖರೀದಿಸಲು ರೂ. 25.00 ಲಕ್ಷಗಳನ್ನು ಮೀಸಲಿಡಲಾಗಿದೆ. ಈ ವರ್ಷ ಘನತ್ಯಾಜ್ಯ ನಿರ್ವಹಣೆಗೆ ರೂ. 1412.28 ಲಕ್ಷಗಳನ್ನು ಮೀಸಲಿಡಲಾಗಿದೆ. ಹಾಗೂ ಬಂಡವಾಳ ಹೂಡಿ ಹೊಸ ತಂತ್ರಜ್ಞಾನದ ಮಶೀನರಿಗಳನ್ನು ಹಾಗೂ ವಿವಿಧ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ರೂ. 252.44 ಲಕ್ಷಗಳನ್ನು ಘನತಾಜ್ಯ ನಿರ್ವಹಣೆ ಕಾರ್ಯಕ್ರಮಕ್ಕಾಗಿ ಮೀಸಲಿಡಲಾಗಿದೆ.

ಇದರೊಂದಿಗೆ ಉದ್ಯಾನವನ ನಿರ್ವಹಣೆ, ಗಿಡ ನೆಡುವ ಕಾರ್ಯಕ್ರಮ, ರುದ್ರಭೂಮಿಗಳಲ್ಲಿ ಆದ್ಯತೆ ಮೇರೆಗೆ ಪರಿಸರ ಸ್ನೇಹಿ ವಿದ್ಯುತ್/ಚಿತಾಗಾರಗಳನ್ನು ಅಳವಡಿಸಲು, ಸ್ಮಶಾನ ಮತ್ತು ಶವ ಸಂಸ್ಕಾರ ಸ್ಥಳಗಳ ನಿರ್ವಹಣೆ, ಈಜುಗೊಳ ನಿರ್ವಹಣೆ, ಇನ್ನಿತರ ಸಾರ್ವಜನಿಕ ನಾಗರಿಕ ಸೌಲಭ್ಯಗಳನ್ನು ಒದಗಿಸಲು, ಇಂದಿರಾ ಕ್ಯಾಂಟಿನ್ ಹಾಗೂ ಇನ್ನಿತರ ಸಾರ್ವಜನಿಕ ಸೌಲಭ್ಯಕ್ಕಾಗಿ ಅನುದಾನ ಮೀಸಲಿರಿಸಿದೆ.

ಈ ಸಂದರ್ಭದಲ್ಲಿ ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (ಪರಿಸರ) ಆನಂದ ಬದಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (ಸಿವಿಲ್) ಬಂಡಿವಡ್ಡರ, ಲೆಕ್ಕಾಧೀಕ್ಷಕರಾದ ಟಿ.ಎಚ್. ದ್ಯಾವನೂರ ಹಾಗೂ ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

ನಗರಸಭೆಯಲ್ಲಿ ಸೇವೆ ಪಡೆಯಲು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಪ್ರತಿ ಶಾಖೆಗೆ ಬಯೋಮೆಟ್ರಿಕ್ ಆಧಾರಿತ ಪ್ರವೇಶಾತಿಯನ್ನು ಕಡ್ಡಾಯಗೊಳಿಸಿ ಸಾರ್ವಜನಿಕದ ಸಂಪರ್ಕದ ಸಮಯ ಹೊರತುಪಡಿಸಿ ಇನ್ನುಳಿದ ಸಮಯದಲ್ಲಿ ಇನ್ನಿತರರಿಗೆ ಪ್ರವೇಶಾತಿಯುನ್ನು ನಿಷೇಧಿಸಲು ಸೂಕ್ತ ವ್ಯವಸ್ಥೆ ಮಾಡಿ ಸಾರ್ವಜನಿಕರಿಗಾಗುವ ತೊಂದರೆ ಹಾಗೂ ಮಧ್ಯವರ್ತಿಗಳ ಹಾವಳಿಯನ್ನು ತಡೆಯಲು ಮತ್ತು ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ಅವರ ಕೆಲಸ ಕಾರ್ಯಗಳನ್ನು ಪೂರೈಸಲು ಸೂಕ್ತ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.

ನಗರಸಭೆಯ ಆಧೀನದ ಮುನ್ಸಿಪಲ್ ಹೈ-ಸ್ಕೂಲ್ ನಿರ್ವಹಣೆ ಹಾಗೂ ದುರಸ್ಥಿಗಾಗಿ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಎಸ್.ಸಿ/ಎಸ್‌ಟಿ ಜನಾಂಗದ, ಆರ್ಥಿಕವಾಗಿ ಹಿಂದುಳಿದವರ ಹಾಗೂ ವಿಕಲ ಚೇತನವುಳ್ಳವರ ಆರ್ಥಿಕ ಸ್ವಾವಲಂಬನೆ ಹಾಗೂ ಅಭಿವೃದ್ದಿಗಾಗಿ, ನಗರದ ನೈರ್ಮಲ್ಯವನ್ನು ಹೆಚ್ಚಿಸಲು ಸಾರ್ವಜನಿಕ ಹಾಗೂ ವೈಯಕ್ತಿಕ ಶೌಚಾಲಯ ಕಾಮಗಾರಿಗಳನ್ನು ಕೈಗೊಳ್ಳಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕುಡಿಯುವ ನೀರು ಹಾಗೂ ಒಳಚರಂಡಿ

ಶುದ್ಧ ಕುಡಿಯುವ ನೀರು ಒದಗಿಸುವ ಕಾರ್ಯಕ್ಕಾಗಿ ಈ ವರ್ಷ ವಿದ್ಯುತ್ ಬಿಲ್ ಹೊರತುಪಡಿಸಿ ರೂ. 280 ಲಕ್ಷಗಳನ್ನು ವೆಚ್ಚಕ್ಕಾಗಿ ಅವಕಾಶ ಮಾಡಿಕೊಳ್ಳಲಾಗಿದೆ. ಸ್ಥಾವರ ಯಂತ್ರೋಪಕರಣಗಳಂತಹ ಬಂಡವಾಳ ವೆಚ್ಚಕ್ಕಾಗಿ ರೂ. 676.18 ಲಕ್ಷಗಳನ್ನು ವೆಚ್ಚ ಮಾಡಲು ಉದ್ದೇಶಿಸಲಾಗಿದೆ. ಇದರೊಂದಿಗೆ ರೂ. 1414 ಲಕ್ಷಗಳ ವಿದ್ಯುತ್ ಬಿಲ್, ಒಳಚರಂಡಿ ಯೋಜನೆಯ ನಿರ್ವಹಣೆಗಾಗಿ ರೂ. 100 ಲಕ್ಷಗಳನ್ನು ಹಾಗೂ ನಿರ್ಮಾಣಕ್ಕಾಗಿ ರೂ. 265.18 ಲಕ್ಷಗಳನ್ನು ಪ್ರಸಕ್ತ ಆಯವ್ಯಯದಲ್ಲಿ ಮೀಸಲಿಡಲಾಗಿದೆ.


Spread the love

LEAVE A REPLY

Please enter your comment!
Please enter your name here