ಗದಗ: ಕಡಲೆ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ರೈತರು ರೆಡ್ ಹ್ಯಾಂಡ್ ಆಗಿ ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ಗದಗನ ಹೊಂಬಳ ರಸ್ತೆಯ ಸರ್ವಜ್ಞ ಸರ್ಕಲ್ ಬಳಿ ನಡೆದಿದೆ.
ಬೆಳಗಿನ ಜಾವ ವಾಯು ವಿಹಾರಕ್ಕೆ ತೆರಳಿದ್ದ ನಾಗರಿಕರ ಕಣ್ಣಿಗೆ ಕಳ್ಳನ ಚಲನವಲನ ಬಿದ್ದಿದ್ದು, ತಕ್ಷಣವೇ ಈ ಬಗ್ಗೆ ರೈತರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ರೈತರು ಸ್ಥಳಕ್ಕೆ ಧಾವಿಸಿ, ಜಮೀನಿನಲ್ಲಿ ಕಡಲೆ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ.
ಕಳೆದ ಹಲವು ದಿನಗಳಿಂದ ರೈತರ ಜಮೀನುಗಳಲ್ಲಿ ಕಡಲೆ ಕಳ್ಳತನ ನಡೆಯುತ್ತಿದ್ದು, ಕಡಲೆ ಕಳ್ಳರ ಹಾವಳಿಯಿಂದ ರೈತರು ಕಂಗಾಲಾಗಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಕಡಲೆ ಕಳ್ಳತನ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ರೈತರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಕಳ್ಳನನ್ನು ಕಂಬಕ್ಕೆ ಕಟ್ಟಿ, ತಲೆ ಹಾಗೂ ಕೊರಳಿಗೆ ಕಡಲೆ ಗಿಡಗಳ ಮಾಲೆ ಹಾಕಿ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆಯ ಮಾಹಿತಿ ಪಡೆದ ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದರು. ಘಟನೆಯ ಕುರಿತು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.



