ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ವಿದ್ಯಾರ್ಥಿ ಜೀವನ ಎಂಬುದು ಮಹತ್ವದ ಸಮಯವಾಗಿದ್ದು, ಸಮಾಜದಲ್ಲಿ ಸಾಧನೆ ಮಾಡುವ ಸಾಕಷ್ಟು ಜನರನ್ನು ನೋಡಿ ಅವರಂತೆ ನಾವಾಗಬೇಕು ಎನ್ನುವ ಸಾಧನೆ ಮಾಡುವ ಛಲ ವಿದ್ಯಾರ್ಥಿಗಳಲ್ಲಿ ಬೆಳೆದು ಬರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ತಾಪಸ್ಕರ ಅಭಿಪ್ರಾಯಪಟ್ಟರು.
ಅವರು ಪ್ರಸಕ್ತ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಗದಗ ಜಿಲ್ಲೆಗೆ ಹಾಗೂ ಶಿರಹಟ್ಟಿ ಬ್ಲಾಕ್‌ಗೆ ಉತ್ತಮ ಸ್ಥಾನ ಪಡೆದ ವಿದ್ಯಾರ್ಥಿಗಳ ಮನೆಗೆ ಹೋಗಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಸಾಧನೆಯಿಂದ ಶಾಲೆ ಗುರುತಿಸಲ್ಪಡಬೇಕು, ಶಿಕ್ಷಕರು ಗೌರವಿಸಲ್ಪಡಬೇಕು. ಅದುವೇ ನಿಜವಾದ ಸಾಧನೆ. ಅಂತಹ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲು ಶಿಕ್ಷಣ ಇಲಾಖೆಯೇ ಅವರ ಮನೆಯ ಬಾಗಿಲಿಗೆ ಬಂದಿದೆ. ಸಾಧನೆ ಎನ್ನುವದು ಸಾಧಕನ ಸ್ವತ್ತೆ ಹೊರತು ಸೋಮಾರಿಯ ಸ್ವತ್ತಲ್ಲ. ಸಾಧನೆಗೆ ಯಾವುದೇ ರೀತಿಯ ಕಟ್ಟಳೆಗಳಿರುವದಿಲ್ಲ. ಆದರೆ ಕಠಿಣ ಪರಿಶ್ರಮ, ನಿತ್ಯ ಅಭ್ಯಾಸ, ಪ್ರಾಮಾಣಿಕತೆ ಹಿರಿಯರಲ್ಲಿ ಗೌರವ ನೀಡುವ ಪ್ರತಿಯೊಬ್ಬರೂ ಸಾಧನೆ ಮಾಡಲು ಅರ್ಹರಾಗಿರುತ್ತಾರೆ. ಈ ನಿಟ್ಟಿನಲ್ಲಿ ಶಿರಹಟ್ಟಿ ಬ್ಲಾಕ್‌ನಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಸಾಧನೆ ಮಾಡಿದ ಮಕ್ಕಳಿಗೆ ಹಾಗೂ ಆಯಾ ಶಾಲೆಗಳ ಶಿಕ್ಷಕರಿಗೆ ಇಲಾಖೆ ಪರವಾಗಿ ಅಭಿನಂದಿಸುವದಾಗಿ ಹೇಳಿದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 620 ಅಂಕ(ಶೇ.99.20) ಗಳಿಸಿ ಜಿಲ್ಲೆಗೆ ದ್ವಿತೀಯ ಹಾಗೂ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಲಕ್ಷ್ಮೇಶ್ವರದ ಲಿಟಲ್ ಹಾರ್ಟ್ಸ್ ಇಂಟರ್‌ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿನಿ ಪೂಜಾ ಕುರಹಟ್ಟಿ, ಇದೇ ಶಾಲೆಯ ಇನ್ನೋರ್ವ ವಿದ್ಯಾರ್ಥಿ 619 (ಶೇ. 99.04) ಅಂಕ ಗಳಿಸಿ ಜಿಲ್ಲೆಗೆ ತೃತೀಯ ಹಾಗೂ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದ ಅಮೃತ್ ಶಿರಹಟ್ಟಿ, 617 (ಶೇ.98.72) ಅಂಕ ಗಳಿಸಿ ತಾಲೂಕಿಗೆ ತೃತೀಯ ಸ್ಥಾನ ಪಡೆದ ಲಕ್ಷ್ಮೇಶ್ವರದ ಯುನಿಕ್ ಸ್ಕೂಲ್ ವಿದ್ಯಾರ್ಥಿನಿ ರಕ್ಷಿತಾ ಸಂಗನಪೇಟ ಈ ಮೂವರೂ ವಿದ್ಯಾರ್ಥಿಗಳ ಮನೆಗೆ ಹೋಗಿ ಇಲಾಖೆಯ ಪರವಾಗಿ ಅವರ ಮನೆಯಲ್ಲೇ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿಗಳ ಸಂಘ, ಶಿಕ್ಷಕರ ಸಂಘ ಹಾಗೂ ನೌಕರರ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಮುಖ್ಯೋಪಾಧ್ಯಾಯರು, ಶಾಲೆಗಳ ಶಿಕ್ಷಕ/ಶಿಕ್ಷಕಿಯರು, ಇ.ಸಿ.ಓ, ಬಿ.ಆರ್.ಪಿ, ಸಿ.ಆರ್.ಪಿ, ಪಾಲಕರು, ಉಪಸ್ಥಿತರಿದ್ದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎ. ರಡ್ಡೇರ ಅವರು ದೂರವಾಣಿ ಕರೆಯ ಮೂಲಕ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶಿರಹಟ್ಟಿ ಬ್ಲಾಕ್ ಗದಗ ಜಿಲ್ಲೆಗೆ ಎರಡನೇ ಸ್ಥಾನ ಪಡೆದ ಪ್ರಯುಕ್ತ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ತಾಪಸ್ಕರರನ್ನು ಸಾಧನೆ ಮಾಡಿದ ವಿದ್ಯಾರ್ಥಿಗಳ ಪಾಲಕರು ಸನ್ಮಾನಿಸಿದರು.