ವಿಜಯನಗರ:- ಭೂಮಿ ಕಳೆದುಕೊಂಡು ಸುಮಾರು 12 ವರ್ಷಗಳ ಮೇಲಾದರೂ ಪರಿಹಾರ ಒದಗಿಸದ ಭೂಸ್ವಾಧೀನಾಧಿಕಾರಿ ಕಚೇರಿಗೆ ಬೀಗ ಜಡಿದು ಅನ್ನದಾತರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಶೀಘ್ರವೇ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ಈ ಘಟನೆ ಜರುಗಿದೆ. ಹೌದು, ಹೂವಿನಹಡಗಲಿಯ ಸಿಂಗಟಾಲೂರು ಏತ ನೀರಾವರಿಗೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮುಂಡವಾಡ ಗ್ರಾಮದ ರೈತರಿಂದ 2013 ರಲ್ಲಿ ಭೂಮಿ ವಶಪಡಿಸಿಕೊಳ್ಳಲಾಗಿತ್ತು. ಆದರೆ ಭೂಮಿ ಕಳೆದುಕೊಂಡು 12 ವರ್ಷಗಳು ಕಳೆದಿದ್ರೂ ಇದುವರೆಗೂ ಪರಿಹಾರ ನೀಡಿಲ್ಲ. ಪೂರ್ಣ ಪ್ರಮಾಣದಲ್ಲಿ ಕಾಲುವೆಗಳಿಗೆ ನೀರು ಹರಿಸಿಲ್ಲ. ಪರಿಹಾರ ಕೇಳಿದ್ರೆ ಇಂದು, ನಾಳೆ ಎಂದು ಅಧಿಕಾರಿಗಳು, ಸತಾಯಿಸುತ್ತಿದ್ದಾರೆ.
ಇರುವ ಜಮೀನು ಕಳೆದುಕೊಂಡು ಬೀದಿಗೆ ಬಿದ್ದಿದ್ದೇವೆ. ಕುಟುಂಬ ನಿರ್ವಹಣೆ ಮಾಡೋದು ಕಷ್ಟ ಆಗ್ತಿದೆ. ಹೀಗಾಗಿ ಪರಿಹಾರ ಕೊಡಿ, ಇಲ್ಲವೇ ವಿಷ ಕೊಡಿ ಎಂದು ರೈತರು ಒತ್ತಾಯ ಮಾಡಿದ್ದಾರೆ. ರೈತರ ಮನವೊಲಿಸಲು ಪೊಲೀಸರು ಹಾಗೂ ಅಧಿಕಾರಿಗಳು ಹರಸಾಹಸಪಟ್ಟಿದ್ದಾರೆ.



