ಗದಗ ಜಿಲ್ಲೆ ಸಂಗೀತದಲ್ಲಿ ಸಮೃದ್ಧವಾಗಿದೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ 2025-26ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಸುಗಮ ಸಂಗೀತ ಕಲಾ ತರಬೇತಿ ಕಾರ್ಯಕ್ರಮಕ್ಕೆ ಬುಧವಾರ ಗದಗನ ರಾಜೀವ ಗಾಂಧಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಬರಟ್ಟಿ ಚಾಲನೆ ನೀಡಿದರು.

Advertisement

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವದಲ್ಲಿ ಸಂಗೀತ ಕ್ಷೇತ್ರಕ್ಕೆ ಭಾರತ ರತ್ನ ಪ್ರಶಸ್ತಿ ಪಡೆದ ಏಕೈಕ ಸಂಗೀತ ವಿದ್ವಾಂಸರಾದ ಪಂಡಿತ ಭೀಮಸೇನ ಜೋಶಿ ಗದುಗಿನವರು. ಜೊತೆಗೆ ರಾಜ್ಯದಲ್ಲಿ ಗದಗ ಎಂದ ತಕ್ಷಣ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ಸಂಗೀತ ಪಾಠಶಾಲೆ ಎಲ್ಲರಿಗೂ ನೆನಪಾಗುತ್ತದೆ. ಅಂತಹ ಸಂಗೀತದ ಪರಂಪರೆ ಹೊಂದಿರುವ ಗದಗ ಜಿಲ್ಲೆ ಸಂಗೀತದಲ್ಲಿ ಸಮೃದ್ಧವಾಗಿದೆ. ಸರ್ಕಾರ ಮಕ್ಕಳಿಗೆ ಸುಗಮ ಸಂಗೀತ ತರಬೇತಿಯನ್ನು ನೀಡುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ ಬಿ ಪ್ರಾಸ್ತಾವಿಕವಾಗಿ ಮಾತನಾಡಿ, ವಸತಿ ಶಾಲೆಯ ಮಕ್ಕಳಿಗೆ ಸುಗಮ ಸಂಗೀತ ತರಬೇತಿಯನ್ನು ನುರಿತ ಕಲಾವಿದರಿಂದ ಮುಂದಿನ ಆರು ತಿಂಗಳವರೆಗೆ ನೀಡಲಾಗುವುದು. ವಾದ್ಯ ಪರಿಕರಗಳ ಜೊತೆಗೆ ತರಬೇತಿಯನ್ನು ನೀಡಲಾಗುತ್ತಿದ್ದು, ಮಕ್ಕಳು ತಮಗಿರುವ ಸಂಗೀತದ ಅಭಿರುಚಿಯನ್ನು ಅಭಿವ್ಯಕ್ತಿಗೊಳಿಸುವ ಮೂಲಕ ಸಂಗೀತ ಕಲಾವಿದರಾಗಲು ಇದೊಂದು ಸುವರ್ಣಾವಕಾಶವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಪಾಲಕಿ ವಿದ್ಯಾ ಬೆಳವಣಕಿ, ಪಾಪನಾಶಿ ತಾಂಡಾದ ಸುಗಮ ಸಂಗೀತ ಕಲಾವಿದರಾದ ಸಾವಿತ್ರಿ ಎಂ.ಲಮಾಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜಕುಮಾರ ಸೋಪಡ್ಲಾ, ನವೀನ ಪತ್ತಾರ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಎನ್ ಮಾತನಾಡಿ, ವಸತಿ ಶಾಲೆಯ ಮಕ್ಕಳಿಗೆ ಈಗಾಗಲೇ ಸರ್ಕಾರ ಹತ್ತಾರು ಸೌಲಭ್ಯಗಳನ್ನು ನೀಡಿ ಪ್ರೋತ್ಸಾಹಿಸುತ್ತಿದೆ. ಇದರೊಂದಿಗೆ ಸಂಗೀತ ಅಭ್ಯಾಸ ಮಾಡಲು ಅನುವು ಮಾಡಿಕೊಟ್ಟಿರುವುದು ಸಂತಸ ತಂದಿದೆ ಎಂದರು.


Spread the love

LEAVE A REPLY

Please enter your comment!
Please enter your name here