HomeGadag Newsಮಾದಕ ದ್ರವ್ಯ ಮುಕ್ತ ಜಿಲ್ಲೆಯಾಗಿಸಲು ಶ್ರಮಿಸೋಣ

ಮಾದಕ ದ್ರವ್ಯ ಮುಕ್ತ ಜಿಲ್ಲೆಯಾಗಿಸಲು ಶ್ರಮಿಸೋಣ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಮಾದಕ ದ್ರವ್ಯಗಳ ಸೇವನೆ ಯುವಜನತೆಯ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರಲಿದೆ. ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ಮಾರಾಟ ಹಾಗೂ ಸಾಗಾಣಿಕೆ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ದಿಸೆಯಲ್ಲಿ ಇಲಾಖೆಯ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕೆಂದು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದದ ಗದಗ ಜಿಲ್ಲಾ ಮಾದಕ ದ್ರವ್ಯ ನಿಯಂತ್ರಣ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶಾಲಾ-ಕಾಲೇಜುಗಳ ಹತ್ತಿರವಿರುವ ಗೂಡಂಗಡಿಗಳಲ್ಲಿ ಮಾದಕ ದ್ರವ್ಯಗಳ ಮಾರಾಟವಾಗುವ ಸಂಭವ ಅಧಿಕವಾಗಿರುತ್ತವೆ. ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಿಸಿದ ವಿವಿಧ ಇಲಾಖೆ ಅಧಿಕಾರಿಗಳು ಅಂತಹ ಸ್ಥಳಗಳ ಮೇಲೆ ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿರಂತರವಾಗಿ ನಿಗಾ ವಹಿಸಬೇಕು ಎಂದರು.

ಮಾದಕ ದ್ರವ್ಯಗಳ ವ್ಯಸನದಿಂದ ಹಲವಾರು ದುಷ್ಪರಿಣಾಮಗಳು ಆಗಿರುವ ಬಗ್ಗೆ ಈಗಾಗಲೇ ಅನೇಕ ಉದಾಹರಣೆಗಳನ್ನು ಸಮಾಜದಲ್ಲಿ ನೋಡಬಹುದಾಗಿದೆ. ವ್ಯಸನದಿಂದಾಗಿ ಅನೇಕ ಕುಟುಂಬಗಳು ಬೀದಿಗೆ ಬಂದಿವೆ. ಇದೊಂದು ಸಾಮಾಜಿಕ ಪಿಡುಗಾಗಿದ್ದು, ಸಂಪೂರ್ಣ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರವೂ ಅತ್ಯಗತ್ಯವಾಗಿದೆ. ಮಾದಕ ದ್ರವ್ಯಗಳನ್ನು ಸೇವಿಸುವವರು ಹಾಗೂ ಮಾರಾಟ/ಸಾಗಾಟ ಮಾಡುವವರ ಮಾಹಿತಿ ದೊರೆತಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಸಹಾಯವಾಣಿ ಸಂಖ್ಯೆ-112 ಕರೆ ಮಾಡಿ ಮಾಹಿತಿ ಒದಗಿಸಬೇಕು ಎಂದು ಕೋರಿದರು.

Gadag District Narcotics Control Committee meeting

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆಚ್ಚಾಗಿ ಯುವಜನರೇ ಮಾದಕ ವ್ಯಸನಿಗಳಾಗಿದ್ದು, ಇದರಿಂದ ಅನೇಕ ದುಷ್ಪರಿಣಾಮ ಬೀರಲಿದೆ. ಇದರ ಸಂಪೂರ್ಣ ನಿಯಂತ್ರಣಕ್ಕೆ ಅಧಿಕಾರಿ ವರ್ಗ ಮುಂದಾಗಬೇಕು. ಜಿಲ್ಲೆಯ ಮೆಡಿಕಲ್ ಹಾಗೂ ಇಂಜನೀಯರಿಂಗ್ ಕಾಲೇಜು ಮತ್ತು ವಸತಿ ನಿಲಯಗಳ ಮೇಲೆ ನಿಗಾವಹಿಸಬೇಕು. ಶಾಲಾ-ಕಾಲೇಜುಗಳ ಹತ್ತಿರ ಹಾಗೂ ಹಾಸ್ಟೆಲ್‌ಗಳಲ್ಲಿ ಅಧಿಕಾರಿ ವರ್ಗ ನಿರಂತರವಾಗಿ ತಪಾಸಣೆ ನಡೆಸಬೇಕು. ಮಾದಕ ದ್ರವ್ಯಗಳು ಕಂಡುಬಂದಲ್ಲಿ ತಕ್ಷಣ ಅದರ ಮೂಲ ಪತ್ತೆ ಹಚ್ಚಿ ಅಪರಾಧ ಎಸಗುವವರ ಮೇಲೆ ನಿರ್ದಾಕ್ಷಿಣ್ಯ ಕಾನೂನು ಕ್ರಮಗಳನ್ನು ಕೈಗೊಳ್ಳುವ ಮೂಲಕ ಜಿಲ್ಲೆಯನ್ನು ಮಾದಕ ದ್ರವ್ಯ ಮುಕ್ತ ಜಿಲ್ಲೆಯಾಗಿಸಲು ಅಧಿಕಾರಿಗಳು ಪಣ ತೊಡಬೇಕು ಎಂದರು.

ಮದ್ಯ, ತಂಬಾಕು, ಗಾಂಜಾ, ಕೋಕೇನ್, ಓಪಿಯಮ್, ಅಂಪಿಟಮೈನ್, ಹೆರಾಯಿನ್, ನಿದ್ರೆ ಮಾತ್ರೆಗಳು, ಅನಿಲಗಳು (ವೈಟನರ್ ಪೆಟ್ರೋಲಿಯಂ ಉತ್ಪನ್ನಗಳು) ಮುಂತಾದವುಗಳು ಮಾದಕ ವಸ್ತುಗಳಾಗಿವೆ. ಇವುಗಳ ಚಟವು ವ್ಯಕ್ತಿಯ ಮೆದುಳಿನ ಮೇಲೆ ದೀರ್ಘಕಾಲದ ಮತ್ತು ಪ್ರಭಾವೀ ಪರಿಣಾಮ ಬೀರುತ್ತವೆ. ಮಾದಕ ವಸ್ತುಗಳನ್ನು ದುರುಪಯೋಗಪಡಿಸಿಕೊಳ್ಳುವ ವ್ಯಕ್ತಿಗಳು ತಮ್ಮ ಜವಾಬ್ದಾರಿಗಳನ್ನು ನಿರ್ಲಕ್ಷಿಸುತ್ತಾರೆ. ಶಾಲಾ ವಿದ್ಯಾರ್ಥಿಗಳು ತರಗತಿಗಳಿಗೆ ಗೈರು ಹಾಜರಾಗುವುದು, ಕೆಲಸವನ್ನು ಅರ್ಧಕ್ಕೆ ಬಿಡುವುದು ಸೇರಿದಂತೆ ಇತರ ಕಾರಣಗಳ ಮೂಲಕ ಗುರುತಿಸಬಹುದು. ಮಾದಕ ದ್ರವ್ಯಗಳಿಗೆ ಬಲಿಯಾದವರನ್ನು ಇಲಾಖಾಧಿಕಾರಿಗಳು ಗುರುತಿಸಬೇಕು. ಅವರ ಚಲನವಲನಗಳ ಮೂಲಕ ಅವರನ್ನು ಗಮನಿಸಿ, ಮಾದಕ ದ್ರವ್ಯಗಳ ಸರಬರಾಜನ್ನು ಬುಡಸಮೇತ ಕಿತ್ತೆಸೆಯಲು ಅಧಿಕಾರಿಗಳು ಶ್ರಮಿಸುವಂತೆ ಸೂಚಿಸಿದರು.

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ರವಿ ಗುಂಜೀಕರ್, ಜಿಮ್ಸ್ ಮಾನಸಿಕ ವಿಭಾಗದ ಮುಖ್ಯಸ್ಥ ಡಾ. ಸೋಮಶೇಖರ ಬಿಜ್ಜಳ ಸೇರಿದಂತೆ ಪೊಲೀಸ್, ಅಬಕಾರಿ, ಅರಣ್ಯ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ, ಅಬಕಾರಿ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ದೈನಂದಿನ ಕರ್ತವ್ಯದೊಂದಿಗೆ ಮಾದಕ ದ್ರವ್ಯಗಳ ನಿಯಂತ್ರಣ ಕಾರ್ಯದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಸೂಚಿಸಿದರು. ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ಹೆಚ್ಚು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುವ ಮೂಲಕ ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ನಿಯಂತ್ರಣಕ್ಕೆ ಕೈ ಜೋಡಿಸುವಂತೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ತಿಳಿಸಿದರು.

`ಜಗತ್ತಿನಲ್ಲಿ ಹೇಳುವುದೆಲ್ಲವನ್ನೂ ಈಗಾಗಲೇ ಹೇಳಿಯಾಗಿದೆ. ಈಗೇನಿದ್ದರೂ ಮಾಡುವುದೊಂದೇ ಬಾಕಿ’ ಎಂದು ಸಿದ್ದೇಶ್ವರ ಶ್ರೀಗಳು ತಿಳಿಸಿದಂತೆ ನಾವೆಲ್ಲರೂ ಮಾದಕದ್ರವ್ಯ ನಿಯಂತ್ರಣಕ್ಕೆ ಸಂಪೂರ್ಣವಾಗಿ ಕಾರ್ಯನಿರ್ವಹಿಸೋಣ. ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ಸಂಪೂರ್ಣ ನಿಯಂತ್ರಣ ಮಾಡುವ ಮೂಲಕ ಮಾದಕ ದ್ರವ್ಯ ಮುಕ್ತ ಜಿಲ್ಲೆಯಾಗಿಸುವಲ್ಲಿ ಶ್ರಮಿಸೋಣ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಕರೆ ನೀಡಿದರು.

 


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!