ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮೊನ್ನೆ ನಡೆದ `ಪೊಲೀಸ್ ಧ್ವಜ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಗದಗ ಜಿಲ್ಲಾ ಪೊಲೀಸ್ ಸರ್ವ ಸಮರ್ಥವಾಗಿದೆ, ಹೆಚ್ಚಿನ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯೂ ಆಗುತ್ತಿದೆ ಎಂದಿದ್ದರು. ಪೊಲೀಸ್ ವರಿಷ್ಠಾಧಿಕಾರಿಗಳ ಈ ಮಾತು ಹೇಳಿಕೆಗಷ್ಟೇ ಸೀಮಿತವಲ್ಲ, ಕೃತಿಯಲ್ಲಿಯೂ ನಡೆಯುತ್ತಿದೆ ಎಂಬುದು ಸಾಬೀತಾಗುತ್ತಲೇ ಇದೆ.
ಅಂತರರಾಜ್ಯ ಕಿಲಾಡಿ ಕಳ್ಳರ ತಂಡವೊಂದು ಆಗಾಗ ಗದಗ-ಬೆಟಗೇರಿ ಅವಳಿ ನಗರದಲ್ಲಿ ತಮ್ಮ ಕೈಚಳಕ ತೋರಿಸಿ ನಾಪತ್ತೆಯಾಗುತ್ತಿತ್ತು. ಒಂದು ತಂಡ ಬೀಗ ಹಾಕಿದ್ದ ಮನೆಗಳನ್ನು ಟಾರ್ಗೆಟ್ ಮಾಡಿದರೆ, ಇನ್ನೊಂದು ತಂಡ ಚಿನ್ನದ ಆಭರಣಗಳನ್ನು ಹೊಸದರಂತೆ ಹೊಳೆಯುವ ಹಾಗೆ ಮಾಡುತ್ತೇವೆ ಎಂದು ವಂಚಿಸಿ ಪರಾರಿಯಾಗುತ್ತಿತ್ತು. ಈ ಅಂತರರಾಜ್ಯ ಕಳ್ಳರನ್ನು ಪತ್ತೆ ಮಾಡುವುದು ಖಾಕಿ ಪಡೆಗೆ ಸವಾಲೇ ಆಗಿತ್ತು. ಆದರೆ, ಭರ್ಜರಿ ಕಾರ್ಯಾಚರಣೆ ನಡೆಸಿದ ಗದಗ ಜಿಲ್ಲಾ ಪೊಲೀಸರು ಈ ಕಿಲಾಡಿ ಕಳ್ಳರನ್ನು ಸೆರೆಹಿಡಿದು ಜೈಲಿಗೆ ಅಟ್ಟಿದ್ದಾರೆ.
ಬೆಟಗೇರಿ ಬಡಾವಣೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಹಳೆಯ ಚಿನ್ನವನ್ನು ಹೊಳೆಯುವ ಹಾಗೆ ಮಾಡುತ್ತೇವೆ ಎಂದು ಬಿಹಾರ ಮೂಲದ ದೀಪಕ್ ಹಾಗೂ ಬಿಪಿನ್ ಕುಮಾರ ಎಂಬುವವರು ವಂಚಿಸುತ್ತಿದ್ದರು. 2024 ಜುಲೈ 3ರಂದು, ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಶಕುಂತಲಾ ಎಂಬುವರ ಮನೆಯಲ್ಲಿ 3 ಲಕ್ಷ 72 ಸಾವಿರ ರೂಪಾಯಿ ಮೌಲ್ಯದ 92 ಗ್ರಾಂ ಚಿನ್ನದ ಆಭರಣವನ್ನು ಹೊಳೆಯುವ ಹಾಗೆ ಮಾಡುತ್ತೇವೆ ಎಂದು ಹೇಳಿ ವಂಚಿಸಿದ್ದರು.
ಹೊಸದಾಗಿ ಒಂದು ವಿಧದ ಪೌಡರ್ ಬಂದಿದ್ದು, ಅದರಲ್ಲಿ ಹಾಕಿ ಸ್ವಚ್ಛಗೊಳಿಸುತ್ತೇವೆ ಎಂದು ಹೇಳಿ, ಅವರದೇ ಮನೆಯ ಪಾತ್ರೆಯೊಂದರಲ್ಲಿ ವಿಶೇಷ ಪೌಡರ್ ಹಾಕಿ, ಅವರು ಕೊಟ್ಟ ಆಭರಣವನ್ನೂ ಹಾಕಿದಂತೆ ಮಂಕುಬೂದಿ ಎರಚುತ್ತಿದ್ದರು. ಒಂದು ಗಂಟೆಯ ನಂತರ ಪಾತ್ರೆಯ ಮುಚ್ಚಳ ತೆರೆದು ನೋಡುವಂತೆ ತಿಳಿಸಿ ಅಲ್ಲಿಂದ ಪರಾರಿಯಾಗುತ್ತಿದ್ದರು. ಹೀಗೆ ಮೋಸ ಮಾಡುತ್ತಿದ್ದ ದೀಪಕ್ ಹಾಗೂ ಬಿಪಿನ್‌ಕುಮಾರ್ ಎನ್ನುವವರನ್ನು ಬಂಧಿಸಿ ಅವರಿಂದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ಬಿ.ಎಸ್. ನೇಮಗೌಡ ಮಾಹಿತಿ ನೀಡಿದರು.
ಪೊಲೀಸರ ಈ ಕಾರ್ಯಾಚರಣೆ, ಆರೋಪಿಗಳ ಬಂಧನದಿಂದ ಅವಳಿ ನಗರದ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಇಲಾಖೆಯ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ತಮಿಳುನಾಡಿನಿಂದ ಬಸ್ ಹಾಗೂ ರೈಲ್ವೆ ಮೂಲಕ ಗದಗ ನಗರಕ್ಕೆ ಬಂದು, ಬೀಗ ಹಾಕಿರುವ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ನಡೆಸಿ ಪರಾರಿಯಾಗುತ್ತಿದ್ದ ತಮಿಳುನಾಡು ಮೂಲಕ ವೆಂಕಟೇಶ ಹಾಗೂ ಸೂರ್ಯ ಶೆಟ್ಟಿ ಇದುವರೆಗೆ 7 ಮನೆಗಳಲ್ಲಿ ತಮ್ಮ ಕೈಚಳಕ ತೋರಿದ್ದರು. ಈ ಇಬ್ಬರು ಕಿಲಾಡಿ ಕಳ್ಳರು ಕರ್ನಾಟಕ, ಆಂದ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿಯೂ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಗದಗ ಶಹರ ಪೊಲೀಸರು ವೆಂಕಟೇಶ ಹಾಗೂ ಸೂರ್ಯ ಶೆಟ್ಟಿಯನ್ನು ಬಂಧಿಸಿ ಅವರಿಂದ 7 ಲಕ್ಷ 60 ಸಾವಿರ ಮೌಲ್ಯದ 130 ಗ್ರಾಂ ಚಿನ್ನ ಹಾಗೂ 2 ಕೆಜಿ ಬೆಳ್ಳಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಮ್ಮ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.