ವಿಜಯಸಾಕ್ಷಿ ಸುದ್ದಿ, ಗದಗ: ಗೃಹಲಕ್ಷ್ಮೀ ಯೋಜನೆಯ ಅನುಷ್ಠಾನ ಪ್ರಗತಿಯಲ್ಲಿ ಇರುವ ತಾಂತ್ರಿಕ ಸಮಸ್ಯೆಗಳ ಪರಿಹಾರ ಕಾರ್ಯವನ್ನು ವೇಗಗೊಳಿಸಲು ಸಚಿವ ಎಚ್.ಕೆ. ಪಾಟೀಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬೆಂಗಳೂರಿನ ವಿಧಾನಸಭೆ ಸಚಿವರ ಕಾರ್ಯಾಲಯದ ಸಭಾಂಗಣದಲ್ಲಿ ಬುಧವಾರ ನಡೆದ ಗದಗ ಜಿಲ್ಲೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಗದಗ ಜಿಲ್ಲೆಯಲ್ಲಿ ಆದಾಯ ತೆರಿಗೆ ಹಾಗೂ ಜಿಎಸ್‌ಟಿ ಪಾವತಿದಾರರ ಒಟ್ಟು ಸಂಖ್ಯೆ 2543 ಎಂದು ಸಭೆಯಲ್ಲಿ ಅಧಿಕಾರಿಗಳು ತಿಳಿಸಿದರು. ಗೃಹಲಕ್ಷ್ಮೀ ಯೋಜನೆ ಪಡೆಯಲು ಆದಾಯ ತೆರಿಗೆ ಹಾಗೂ ಜಿಎಸ್‌ಟಿ ಪಾವತಿಸದಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿದ 650 ಫಲಾನುಭವಿಗಳಿಗೆ ಶೀಘ್ರದಲ್ಲಿ ಯೋಜನೆಯ ಸೌಲಭ್ಯ ಕಲ್ಪಿಸುವಂತೆ ಸಚಿವರು ಸೂಚಿಸಿದರು.
ಯೋಜನೆಯ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ಸಮಯಕ್ಕೆ ತಲುಪುವಂತೆ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದು ಸಚಿವ ಡಾ. ಎಚ್.ಕೆ. ಪಾಟೀಲ ಸೂಚಿಸಿದರು.
ಗದಗ ತಾಲೂಕಿನ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಗೃಹಲಕ್ಷ್ಮೀ ಯೋಜನೆಯ ಅನುಷ್ಠಾನಕ್ಕೆ ಇರುವ ತಾಂತ್ರಿಕ ಸಮಸ್ಯೆಗಳ ಕುರಿತು ಸಭೆಯ ಗಮನಕ್ಕೆ ತರುವ ಮೂಲಕ ಪರಿಹಾರ ಮಾರ್ಗ ನೀಡುವಂತೆ ಕೋರಿದರು.
ಸಭೆಯಲ್ಲಿ ಗದಗ ತಾಲೂಕಿನ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯ ದಯಾನಂದ ಪವಾರ, ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನಾ ನಿರ್ದೇಶಕರಾದ ಅನಿತಾ ಲಕ್ಷ್ಮೀ ಹಾಗೂ ರೋಜಲೀನ್, ಸಹಾಯಕ ನಿರ್ದೇಶಕರಾದ ಹೇಮಾ ಎಚ್, ರೀಜು, ಗದಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ ಜಿ, ಅಧೀಕ್ಷಕ ರಾಜು ಕಂಟಿಗೊಣ್ಣವರ ಸೇರಿದಂತೆ ಗದಗ ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಜರಿದ್ದರು.
ಬಾಕ್ಸ್
ಕುಟುಂಬದ ಮುಖ್ಯಸ್ಥ ಮರಣ ಹೊಂದಿದ ಸಂದರ್ಭಗಳಲ್ಲಿ ರೇಷನ್ ಕಾರ್ಡ್ ನವೀಕರಣಕ್ಕೆ ಉಂಟಾಗಿರುವ ತಾಂತ್ರಿಕ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜನರಿಗೆ ತೊಂದರೆ ಆಗದಂತೆ ಪ್ರಕ್ರಿಯೆ ಸರಳಗೊಳಿಸುವುದು ಅಗತ್ಯ. ಸರ್ಕಾರದ ಮಹತ್ತರ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ಕುಟುಂಬಗಳ ಆರ್ಥಿಕ ನಿರ್ವಹಣೆಗೆ ನೇರ ಸಹಕಾರಿಯಾಗಿದ್ದು, ದೈನಂದಿನ ಕುಟುಂಬ ನಿರ್ವಹಣೆಗೆ ಶಕ್ತಿಯನ್ನು ನೀಡುತ್ತಿದೆ ಎಂದು ಸಚಿವ ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.



