ವಿಜಯಸಾಕ್ಷಿ ಸುದ್ದಿ, ಗದಗ: ಜುಲೈ 27ರಂದು ತುಮಕೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಗ್ಲ್ಯಾಮ್‌ಸ್ಟಾರ್ ಇಂಡಿಯಾ-2025 ಸೀಸನ್-2 ಸೌಂದರ್ಯ ಸ್ಪರ್ಧೆಯಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಸುಂದರಿಯರು ಸ್ಪರ್ಧಿಸಿ ರನ್ನರ್ ಅಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದು, ಟ್ಯಾಲೆಂಟೆಡ್ ಅವಾರ್ಡ್ನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 13 ವರ್ಷದೊಳಗಿನ ಸ್ಪರ್ಧೆ ಹಾಗೂ 13ರಿಂದ 19 ವರ್ಷದೊಳಗಿನವರ ಟೀನ್ ಕ್ಯಾಟಗರಿಯಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂದು ಎಂಡಿ ಮಾಡಲ್ಸ್ ಮ್ಯಾನೇಜ್ಮೆಂಟ್ ಸಂಸ್ಥಾಪಕ ಯೋಗೇಶ್ ಹೊಸಮಠ ಹೇಳಿದರು.
ಬುಧವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ನಂದಾ ಮತ್ತು ದೀಪಾ ಇಬ್ಬರು 13 ವಯಸ್ಸಿನ ರನ್ನರ್ ಅಪ್ ಆಗಿದ್ದಾರೆ. ಟ್ಯಾಲೆಂಟೆಡ್ ರೌಂಡ್‌ನ ರನ್ನರ್ ಅಪ್ ಪ್ರಶಸ್ತಿಯನ್ನು ದೀಪಾ ಪಡೆದುಕೊಂಡಿದ್ದಾರೆ. ಈ ಸ್ಪರ್ಧೆಯು ಸೌಂದರ್ಯದ ಜೊತೆಗೆ ಬುದ್ಧಿಶಕ್ತಿಯನ್ನು ಪರೀಕ್ಷಿಸುವ ಸ್ಪರ್ಧೆಯಾಗಿತ್ತು. ಈ ಪ್ರಶಸ್ತಿಯನ್ನು ನಮ್ಮ ಜಿಲ್ಲೆಯವರು ಪಡೆದದ್ದು ಸಂತಸ ತಂದಿದೆ. ಜೊತೆಗೆ 19 ವರ್ಷ ಮೇಲ್ಪಟ್ಟ ಮಿಸ್ ಕೆಟಗರಿಯಲ್ಲಿ ದಾವಣಗೆರೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮೂಲತಃ ಮುಂಡರಗಿಯವರಾದ ಸೋನಿಯಾ ಶೇಠ್ ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ತಿಳಿಸಿದರು.
ಗದಗ ಜಿಲ್ಲೆಯ ಸಂಸ್ಕೃತಿಯನ್ನು ಪ್ರದರ್ಶಿಸುವ ಉದ್ದೇಶದಿಂದ ಅತೀ ಶೀಘ್ರದಲ್ಲಿ `ಗದಗ ಫ್ಯಾಷನ್ ವೀಕ್’ ಪ್ರಾರಂಭಿಸಲಾಗುವುದು. ಬೆಟಗೇರಿಯ ಸೀರೆಗಳಿಗೆ ದೇಶಾದ್ಯಂತ ಹೆಚ್ಚು ಬೇಡಿಕೆ ಇದೆ. ಅದೇ ರೀತಿ ಕಲೆ, ಸಾಹಿತ್ಯದಲ್ಲೂ ಗದಗ ಜಿಲ್ಲೆ ಮುಂಚೂಣಿಯಲ್ಲಿದ್ದು, ಆ ಎಲ್ಲಾ ಪ್ರತಿಭೆಗಳನ್ನು ಅನಾವರಣಗೊಳಿಸುವುದೇ ಇದರ ಮೂಲ ಉದ್ದೇಶವಾಗಿದೆ ಎಂದರು.
ಈ ವೇಳೆ ನಂದಾ ಹಾಗೂ ದೀಪಾ ಉಪಸ್ಥಿತರಿದ್ದರು.
ಸಾನಿಯಾ ಶೇಠ್ ಮಾತನಾಡಿ, ಸ್ಪರ್ಧೆಯಲ್ಲಿ ಭಾಗವಹಿಸಿ ರನ್ನರ್ ಅಪ್ ಪಡೆದುಕೊಂಡಿದ್ದು ಸಂತಸ ತಂದಿದೆ. ನಾವು ಭಾಗವಹಿಸಿದ ಸ್ಪರ್ಧೆಯಲ್ಲಿ ಬೆಂಗಳೂರು, ಮಂಗಳೂರು, ಬೆಳಗಾವಿ ಸೇರಿದಂತೆ ಸ್ಯಾಂಡಲ್‌ವುಡ್ ನಟಿಯರು ಭಾಗವಹಿಸಿದ್ದರು. ಇವರೆಲ್ಲರ ನಡುವೆ ಸ್ಪರ್ಧಿಸಿ ರನ್ನರ್ ಅಪ್ ಪಡೆದದ್ದು ಹೆಮ್ಮೆ ಮೂಡಿಸಿದೆ. ಖ್ಯಾತ ನಾಯಕ ನಟ ಶರಣ್ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದು ನಮ್ಮ ಸಂತಸವನ್ನು ಇಮ್ಮಡಿಗೊಳಿಸಿದೆ ಎಂದು ತಮ್ಮ ಅನುಭವ ಹಂಚಿಕೊಂಡರು.