ಗದಗ: ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದ ಎರಡು ಮನೆಗಳ ಛಾವಣಿ ಕುಸಿದಿದ್ದು, ಸ್ವಲ್ಪದರಲ್ಲೇ ಮನೆಯಲ್ಲಿ ಇದ್ದವರು ಬಚಾವ್ ಆಗಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ 12ನೇ ವಾರ್ಡ್ ನಲ್ಲಿ ಮಹಾದೇವಪ್ಪ ಗೋಜನೂರು, ಗುರುನಾಥ ಸೊರಟೂರು ಎಂಬುವವರ ಮಣ್ಣಿನ ಮನೆಗಳ ಛಾವಣಿ ಕುಸಿತಗೊಂಡಿದ್ದು, ಮಹಾದೇವಪ್ಪ ದಿನಕೂಲಿ ಕೆಲಸಕ್ಕೆ ಹೋಗಿದ್ದರು, ಮಕ್ಕಳು ಶಾಲೆಗೆ ಹೋಗಿದ್ದರು.
ಮನೆಯಲ್ಲಿದ್ದ ಪತ್ನಿ ಅಂಗಳ ಕಸ ಹೊಡೆಯಲು ಹೊರ ಬಂದಿದ್ದ ವೇಳೆ ಏಕಾಏಕಿ ಮನೆಯ ಛಾವಣಿ ಕುಸಿದು ಬಿದ್ದಿದೆ. ಹೀಗಾಗಿ ಎಲ್ಲರೂ ಸೇಪಾಗಿದ್ದಾರೆ. ಆದರೆ ಮನೆಯಲ್ಲಿದ್ದ ಗೃಹ ಉಪಯೋಗಿ ವಸ್ತುಗಳಿಗೆ ಹಾನಿಯಾಗಿದ್ದು, ಸುದ್ದಿ ತಿಳಿದು ಸ್ಥಳಕ್ಕೆ ಪುರಸಭೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗದಗ ಜಿಲ್ಲೆಯ ಹಲವಡೆ ರಾತ್ರಿಯಿಡೀ ಭಾರಿ ಮಳೆ ಸುರಿದಿದ್ದು, ಮಳೆ ಆರ್ಭಟಕ್ಕೆ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ದ್ಯಾಮುಣಸಿ ಗ್ರಾಮದ ಬಳಿಯ ಹಳ್ಳ ಉಕ್ಕಿ ಹರಿಯುತ್ತಿರುವ ಪರಿಣಾಮ ವಿದ್ಯಾರ್ಥಿಗಳು ಶಾಲೆ-ಕಾಲೇಜಿಗೆ ಹೋಗಲು ಪರದಾಡುತ್ತಿದ್ದಾರೆ. ಅಲ್ಲದೇ, ಕೃಷಿ ಚಟುವಟಿಕೆ ಮತ್ತು ಇತರ ದೈನಂದಿನ ಕೆಲಸಗಳಿಗೆ ಹೋಗಬೇಕಾದ ಸಾರ್ವಜನಿಕರಿಗೂ ತೊಂದರೆ ಉಂಟಾಗಿದೆ. ಮಳೆ ಆರ್ಭಟಕ್ಕೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಹಳ್ಳದ ತಟದಲ್ಲಿ ವಿದ್ಯಾರ್ಥಿಗಳು ನದಿಯನ್ನು ದಾಟಲು ಪರದಾಟ ನಡೆಸಿದರು.