ರಸ್ತೆ ದುರಸ್ತಿಗೆ ಆಗ್ರಹಿಸಿ ರಸ್ತೆಯಲ್ಲಿ ಬಿದ್ದು ಹೊರಳಾಡಿದ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು

0
Spread the love

ರಸ್ತೆ ದುರಸ್ತಿ ಮಾಡಿಸಲು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ

Advertisement

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಪಟ್ಟಣದಲ್ಲಿ ಹಾದು ಹೋಗಿರುವ ಕೈಗಾ-ಇಳಕಲ್ ರಾಜ್ಯ ಹೆದ್ದಾರಿ ಸೇರಿ ಪಟ್ಟಣ ಮತ್ತು ತಾಲೂಕಿನ ಬಹುತೇಕ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಜನತೆ ಪಡಬಾರದ ಯಾತನೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಈ ರಸ್ತೆಗಳನ್ನು ದುರಸ್ತಿ ಮಾಡುವಂತೆ ಆಗ್ರಹಿಸಿ ಜಯ ಕರ್ನಾಟಕ ತಾಲೂಕು ಘಟಕದಿಂದ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಹೊಸ ಬಸ್ ನಿಲ್ದಾಣದ ಹತ್ತಿರ ರಾಜ್ಯ ಹೆದ್ದಾರಿಯಲ್ಲಿ ನಡೆಸಿದ ಪ್ರತಿಭಟನಾಕಾರರು ಪಿಡಬ್ಲೂಡಿ ಮತ್ತು ಜಿಲ್ಲಾ ಉಸ್ತವಾರಿ ಸಚಿವರು ಹಾಗೂ ಶಾಸಕ ರಾಮಣ್ಣ ಲಮಾಣಿ ಅವರ ವಿರುದ್ಧ ಘೋಷಣೆ ಕೂಗಿದರು.

ಪೊಲೀಸರು ಮತ್ತು ಪಿಡಬ್ಲ್ಯೂ ಡಿ ಇಲಾಖೆ ಅಧಿಕಾರಿಗಳು ಪ್ರತಿಭಟನೆ ಕೈಬಿಡುವಂತೆ ಕೇಳಿದರೂ ಕಾರ್ಯಕರ್ತರು ರಸ್ತೆಯಲ್ಲಿ ಬಿದ್ದು ಹೊರಳಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಯ ಕರ್ನಾಟಕ ಸಂಘಟನೆಯ ತಾಲೂಕಾ ಅಧ್ಯಕ್ಷ ಇಸ್ಮಾಯಿಲ್ ಆಡೂರ, ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯಲ್ಲಿ ಮೊಣಕಾಲುದ್ದ ಗುಂಡಿಗಳು ಬಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಮಳೆಗಾಲದಲ್ಲಿ ಹತ್ತಾರು ಸಮಸ್ಯೆಗಳಾದರೆ ಉಳಿದಂತೆ ರಸ್ತೆಗಳು ಧೂಳುಮಯವಾಗಿರುತ್ತವೆ.

ಪಟ್ಟಣದ ಮುಖ್ಯ ಬಜಾರ್ ರಸ್ತೆ ಹದಗೆಟ್ಟು ವರ್ಷಗಳೇ ಕಳೆದಿವೆ. ತಾಲೂಕಿನ ಗದಗ-ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ, ಲಕ್ಷ್ಮೇಶ್ವರದಿಂದ ದೇವಿಹಾಳ, ಬಾಲೆಹೊಸೂರ, ಸೂರಣಗಿ, ದೊಡ್ಡೂರ, ಯತ್ತಿನಹಳ್ಳಿ ಸೇರಿ ಬಹುತೇಕ ಗ್ರಾಮೀಣ ರಸ್ತೆಗಳ ಸ್ಥಿತಿ ಅಯೋಮಯವಾಗಿದೆ. ಸರ್ಕಾರಿ ಬಸ್‌ಗಳು ಬಂದ್ ಆಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ವ್ಯವಸ್ಥೆಗೆ ಧಕ್ಕೆಯಾಗಿದೆ. ಇಡೀ ತಾಲೂಕಿನ ಜನರು ರಸ್ತೆಗಳ ಅವ್ಯವಸ್ಥೆಯ ಬಗ್ಗೆ ರೋಸಿಹೋಗಿದ್ದಾರೆ.

ಈ ನಡುವೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಯರ‍್ರಾಬರ‍್ರಿ ಸಂಚರಿಸುವ ಎಂಸ್ಯಾಂಡ್, ಖಡಿ ಸಾಗಿಸುವ ಟಿಪ್ಪರ್-ಲಾರಿಗಳ ಅಬ್ಬರಕ್ಕೆ ಜನರು ನಲುಗಿ ಹೋಗಿದ್ದಾರೆ. ಲೋಕೋಪಯೋಗಿ ಇಲಾಖೆಯ ಸಚಿವರು ಜಿಲ್ಲೆಯವರಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಸಕರು ನಮ್ಮ ಕ್ಷೇತ್ರದ ಅಭಿವೃದ್ಧಿ ಮತ್ತು ಜನರ ಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸದನದಲ್ಲಿ ಗಟ್ಟಿಧ್ವನಿಯಿಂದ ಕೇಳುವ ಮನಸ್ಥಿತಿಯವರಂತೂ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಬಿ.ಎಸ್ ಹಳ್ಳದ ಮನವಿ ಸ್ವೀಕರಿಸಿದರು.

ಸಂಘಟನಾ ಕಾರ್ಯದರ್ಶಿ ಇಶಾಕಬಾಶಾ ಹರಪನಹಳ್ಳಿ, ರಮೇಶ ಲಮಾಣಿ, ರಮೇಶ ಹಂಗನಕಟ್ಟಿ, ಗೋಪಿ ನಾಯಕ, ಗೌಸ್‌ಮೋದಿನ ಸವಣೂರ, ಹಾಲಪ್ಪ ಭಂಡಾರಿ, ಯಲ್ಲಪ್ಪ ಹಂಜಗಿ, ಅಭಿಷೇಕ್ ಸಾತಪುತೆ, ಸುಲೇಮಾನ ಆಡೂರ, ಅಬ್ದುಲ್ ಖಾದರ್ ಕೊಪ್ಪಳ, ಸೋಹಿಲ್ ಬಂಕಾಪುರ, ಲುಕ್ಮನ ಬೆಟಗೇರಿ, ನಾಸೀರ ಸಿದ್ದಿ, ಗೋಪಿ ನಾಯಕ, ಖಾದರಭಾಷಾ ರಿತ್ತಿ, ಬಸು ಲಮಾಣಿ, ಮಾನಪ್ಪ ನಾಯಕ, ಬಸವರಾಜ ಮೇಲ್ಮುರಿ ಸೇರಿದಂತೆ ಇತರರು ಇದ್ದರು.


Spread the love

LEAVE A REPLY

Please enter your comment!
Please enter your name here