ಗದಗ:-ಕಾರ್ಯವಾಸಿ ಕತ್ತೆ ಕಾಲು ಹಿಡಿ ಎಂಬ ಗಾದೆ ಮಾತು ಇಲ್ಲಿ ಅನ್ವಯಿಸುತ್ತೆ ನೋಡಿ. ಗದಗ ಜಿಲ್ಲೆಯ ರೋಣ ತಾಲೂಕಿನ ಬೋಪಳಾಪೂರ ಗ್ರಾಮದಲ್ಲಿ ವರುಣನ ಕೃಪೆಗಾಗಿ ಇಲ್ಲಿನ ಗ್ರಾಮಸ್ಥರು ಕತ್ತೆ ಮದುವೆ ಮಾಡಿಸಿರುವ ಘಟನೆ ಜರುಗಿದೆ.
ಕತ್ತೆ ಮದುವೆ ಮಾಡಿದ್ರೆ ಮಳೆರಾಯ ಧರೆಗಿಳಿಯುತ್ತಾನೆ ಎಂಬ ನಂಬಿಕೆ ಇಲ್ಲಿನ ಜನರದ್ದು. ಹೀಗಾಗಿ ಪಕ್ಕಾ ಮಧುಮಕ್ಕಳಂತೆ ಕತ್ತೆಗಳಿಗೆ ಬಾಸಿಂಗ ಕಂಕಣ ಕಟ್ಟಿ ಶೃಂಗಾರ ಮಾಡಿದ ರೈತರು, ಗ್ರಾಮದ ಮೈಲಾರ ಲಿಂಗ ದೇವಸ್ಥಾನದ ಮುಂದೆ ಬಡವರ ಮದುವೆ ರೀತಿ ಬಹಳ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿದ್ದಾರೆ. ಇದೇ ವೇಳೆ ಎಲ್ಲಾ ಗ್ರಾಮದ ದೇವರಿಗೆ ಉಡಿ ತುಂಬಿ ದೇವಾನು ದೇವತೆಯರಿಗೆ ಅಭಿಷೇಕದ ಜೊತೆ ವಿಶೇಷ ಪೂಜೆ ಮಾಡಿಸಿದ್ದಾರೆ.
ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ರೈತರು ಬೆಳೆದ ಬೆಳೆಗಳು ಬಾಡುತ್ತಿದ್ದು, ಹೆಸರು ಮೆಕ್ಕೆಜೋಳ ಬೆಳೆಗೆ ಮಳೆ ಕೊರತೆ ಎದುರಾಗಿದೆ. ಹೀಗಾಗಿ ಬಾಡುತ್ತಿರೋ ಬೆಳೆ ನೋಡಿ ಚಿಂತೆಗೀಡಾಗಿರುವ ರೈತ ಸಮೂಹ, ಇದೀಗ ಕತ್ತೆಗಳ ಮದುವೆ ಮಾಡಿಸಿ ವರುಣನ ಆಗಮನಕ್ಕೆ ಕಾದು ಕುಳಿತಿದ್ದಾರೆ.