ಗದಗ:- ನಗರದಲ್ಲಿ ನಡೆದಿದ್ದ ಚಿನ್ನದ ಅಂಗಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ 6 ಗಂಟೆ ಒಳಗೆ ಖದೀಮನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

43 ವರ್ಷದ ಮಹಮ್ಮದ್ ಹುಸೇನ್ ಸಿದ್ದಿಕಿ ಬಂಧಿತ ಆರೋಪಿ. ಈತ ಗುಜರಾತ್‌ನ ಅಹ್ಮದಾಬಾದ್ ಮೂಲದವ ಎನ್ನಲಾಗಿದೆ. ಮಹಾರಾಷ್ಟ್ರದ ಕೊಲ್ಹಾಪೂರದಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಗದಗ ಎಸ್ಪಿ ರೋಹನ್ ಜಗದೀಶ್ ಅವರ ಚಾಣಾಕ್ಷ ಕಾರ್ಯಾಚರಣೆಗೆ ಜೊತೆಗೆ ಕೊಲ್ಹಾಪೂರ ಎಸ್ಪಿಯ ಸಹಕಾರ ಮಹತ್ವದ್ದಾಗಿದೆ. ಆರೋಪಿಯಿಂದ ಸುಮಾರು 80 ಲಕ್ಷ ಮೌಲ್ಯದ ಚಿನ್ನ–ಬೆಳ್ಳಿ ಆಭರಣ ಮತ್ತು ನಗದು ವಶವಾಗಿದೆ.
ಆರೋಪಿಯು, ಕಳ್ಳತನಕ್ಕೂ ಐದು ದಿನ ಮೊದಲು ಜ್ಯುವೆಲ್ಲರಿ ಅಂಗಡಿ ಪಕ್ಕದ ಲಾಡ್ಜ್‌ನಲ್ಲಿ ವಾಸ್ತವ್ಯ ಮಾಡಿ, ಮೇಲ್ಭಾಗದ ಲೋಹದ ಗ್ರಿಲ್ ಕತ್ತರಿಸಿ ಅಂಗಡಿಗೆ ಪ್ರವೇಶಿಸಿ ಲೂಟಿ ನಡೆಸಿದ್ದಾನೆ. ಘಟನೆಯ ನಂತರ ಗದಗ ಹೊಸ ಬಸ್ ನಿಲ್ದಾಣದಿಂದ ಬಸ್ ಏರಿ ಪರಾರಿಯಾಗಿದ್ದ ಕಳ್ಳ, ನಂದಿನಿ ಪಾರ್ಲರ್‌ನಲ್ಲಿ ಹಾಲು ಕುಡಿದಿದ್ದು ಸೇರಿದಂತೆ ಬಸ್ ನಿಲ್ದಾಣದ ಸಿಸಿಟಿವಿಯಲ್ಲಿ ಸಂಪೂರ್ಣ ಚಲನವಲನ ಸೆರೆಯಾಗಿತ್ತು. ಸಿಸಿಟಿವಿಯಲ್ಲಿ ಸಿಕ್ಕ ಫೋಟೋವನ್ನು ಕಂಡಕ್ಟರ್‌ಗೆ ಕಳುಹಿಸಿದ ನಂತರ, ಕಳ್ಳನು ಗದಗ–ಪೂನಾ ಬಸ್‌ನಲ್ಲೇ ಪ್ರಯಾಣಿಸುತ್ತಿದ್ದಾನೆ ಎಂಬುದು ದೃಢಪಟ್ಟಿತು.
ತಕ್ಷಣ ಗದಗ ಮತ್ತು ಕೊಲ್ಹಾಪುರ ಎಸ್ಪಿಗಳ ಜಂಟಿ ಕಾರ್ಯಾಚರಣೆಯಲ್ಲಿ ಬಸ್‌ನ್ನು ತಡೆದು ಖತರ್ನಾಕ ಕಳ್ಳನನ್ನು ಬಂಧಿಸಲು ಪೊಲೀಸರು ಯಶಸ್ವಿಯಾದರು. ಈ ಕುರಿತು ಪೊಲೀಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಸ್ಪಿ ರೋಹನ್ ಜಗದೀಶ್ ಅವರು, ಪ್ರಕರಣದ ಆರೋಪಿ ಯಾವುದೇ ಸಣ್ಣ ಸುಳಿವು ಸಿಗದಂತೆ ಕಳ್ಳತನ ಮಾಡಿ ಪರಾರಿ ಆಗಿದ್ದ. ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ್ದ ಪೊಲೀಸ್ ತಂಡ ಗುಜರಾತ್ ಮೂಲದ ಮಹ್ಮದ್ ಹುಸೇನ ಸಿದ್ದಿಕಿ (43) ಎನ್ನುವ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿ ಬಂಧಿಸಲು 10 ತಂಡಗಳನ್ನು ರಚಿಸಿ ಕೇವಲ 6 ತಾಸಿನ ಒಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಅಂತ ಹೆಮ್ಮೆಯಿಂದ ಹೇಳಿದರು.
ಪ್ರಕರಣ ಭೇದಿಸಲು ದೃಢ ನಿರ್ಧಾರ ಮಾಡಿದ್ದೆವು. ಈ ಆಪರೇಷನ್ ನಲ್ಲಿ ಎಲ್ಲ ಪೊಲೀಸ್ ಸಿಬ್ಬಂದಿಗಳು ತಮ್ಮ ಜವಾಬ್ದಾರಿಯನ್ನು ಕಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇದೊಂದು ಕ್ಲಿಷ್ಟಕರ ಪ್ರಕರಣವಾಗಿತ್ತು. ಪ್ರಕರಣದ ಆರೋಪಿ ಗದಗದಿಂದ 7 ಗಂಟೆ ದೂರ ಕ್ರಮಿಸಿದ್ದಾನೆ ಅಂತ ಮಾಹಿತಿ ಲಭ್ಯವಾಗಿತ್ತು. ಕೆಲವು ಪ್ರಾಥಮಿಕ ಮಾಹಿತಿ ಮೇರೆಗೆ ಆರೋಪಿಯ ಸುಳಿವು ಸಿಗುತ್ತದೆ. ಮಹಾರಾಷ್ಟ್ರದ ಕೊಲ್ಹಾಪೂರ ಜಿಲ್ಲೆಯ ವಡಗಾವ್ ಪೊಲೀಸ್ ಸಹಾಯ ಪಡೆದು ಆರೋಪಿ ಬಂಧಿಸಲಾಗುತ್ತದೆ. ಮಹಾರಾಷ್ಟ್ರದ ಧೀರಜ್ ಮತ್ತು ಅವರ ತಂಡದ ಸಹಾಯದಿಂದ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ಡಿಎಸ್ ಪಿ ಮುರ್ತುಜಾ ಖಾದ್ರಿ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಸಿಇಎನ್ ಡಿಎಸ್ ಪಿ ಮಹಾಂತೇಶ ಸಜ್ಜನ , ಸಿಪಿಐ ಧೀರಜ್ ಶಿಂಧೆ, ಇನ್ಸ್‌ಪೆಕ್ಟರ್ ಗಳಾದ ಎಲ್.ಕೆ. ಜೂಲಕಟ್ಟಿ, ಸಿದ್ರಾಮೇಶ್ವರ ಗಡೇದ, ಪಿಎಸ್ಐಗಳಾದ ಶಿವಕುಮಾರ, ಆರ್.ಆರ್. ಮುಂಡೆವಾಡಗಿ, ಜಿ.ಟಿ. ಜಕ್ಕಲಿ, ಮಾರುತಿ ಜೋಗದಂಡಕರ, ಸಿಬ್ಬಂದಿಗಳಾದ ವಿ.ಎಸ್. ಶೆಟ್ಟೆಣ್ಣವರ, ಯು.ಎಫ್. ಸುಣಗಾರ, ಎಸ್.ಹೆಚ್. ನಾಗೇಂದ್ರಗಡ, ಕೆ.ವಿ. ತಿಗರಿ, ಎಚ್.ಐ. ಯಡಿಯಾಪೂರ, ಅಣ್ಣಪ್ಪ ಕವಲೂರ, ಸಂತೋಷ ಗುಬ್ಬಿ, ವೈ.ಬಿ. ಪಾಟೀಲ್, ಎಸ್.ಎಸ್. ಮಾವಿನಕಾಯಿ, ಎ.ಎಚ್. ಹಣಜಿ, ಪಿ.ಎಚ್. ಗುಬ್ಬಿ, ವಿಜಯಕುಮಾರ ವಾಲಿ. ನೆಹರು ನಾಯಕ, ಬಸವರಾಜ ಗುಡ್ಲಾನೂರ, ಪ್ರಕಾಶ ಗಾಣಿಗೇರ, ಎಮ್.ಬಿ ವಡ್ಡಟ್ಟ. ಅನೀಲ ಬನ್ನಿಕೊಪ್ಪ, ವಿಠಲ್ ಬೆಳಗಲಿ, ಯಲ್ಲಾಲಿಂಗ ದಂಡಿನ. ಪರಶುರಾಮ ದೊಡ್ಡಮನಿ. ಪ್ರವೀಣ ಕಲ್ಲೂರ, ಅವಿನಾಶ ಬ್ಯಾಳಿ. ಮಂಜುನಾಥ ಅಸೂಟಿ, ಅಶೋಕ ಗದಗ, ಸಿ.ಇ.ಎನ್ ಪೊಲೀಸ್ ಠಾಣೆಯ ಆನಂದಸಿಂಗ್ ದೊಡ್ಡಮನಿ, ಮುಂಡರಗಿ ಠಾಣೆಯ ಜೆ.ಐ. ಬಚ್ಚೇರಿ, ಲಕ್ಷೇಶ್ವರ ಠಾಣೆಯ ದಾದಾಖಲಂದರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ನಗರದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ತಂತ್ರಜ್ಞಾನ ಮತ್ತು ವೈಜ್ಞಾನಿಕ ಪರಿಕರಗಳನ್ನು ಬಳಸಿಕೊಂಡು ಅಂತರ್ ರಾಜ್ಯ ಕಳ್ಳನನ್ನು ಬಂಧಿಸಿದ ತಂಡಕ್ಕೆ ರೋಹನ ಜಗದೀಶ ಅವರು ಅಭಿನಂದನೆಗಳನ್ನು ಸಲ್ಲಿಸಿದರು.
ಕೃತ್ಯಕ್ಕೆ ಬಳಸಿದ ಉಪಕರಣಗಳು:-
1. ಗ್ಯಾಸ್ ಕಟರ್ ಮಷಿನ್
2. ಹೈಡ್ರೋಲಿಕ್ ಕಟರ್
3. ದೊಡ್ಡ ಸ್ಪೂ ಡ್ರೈವರ್ – 2
4. ನೈಲನ್ ಹಗ್ಗ
5. ಕಬ್ಬಿಣದ ಸುತ್ತಿಗೆ
6. ಕಬ್ಬಿಣದ ಗ್ರೀಪರ್
ಕದ್ದ ವಸ್ತುಗಳ ಮೌಲ್ಯ:-
ಬಂಗಾರ: 76.810 ಗ್ರಾಂ – ₹10,16,200
ಬೆಳ್ಳಿ: 33,059.242 ಗ್ರಾಂ – ₹61,09,828
ಜೆಮ್‌ಸ್ಟೋನ್: ₹8,95,000
ನಗದು: ₹26,000
ಒಟ್ಟು ಮೌಲ್ಯ: ₹80,21,028.



