ಗದಗ:– ಗದಗದಲ್ಲಿ ರೀಲ್ಸ್ ವಿಚಾರವಾಗಿ ಅಶ್ಲೀಲ ನಿಂದನೆ ಆರೋಪದ ಆಡಿಯೋ ವೈರಲ್ ಆಗಿದ್ದು, ಎಸ್.ಎಸ್.ಕೆ ಸಮಾಜದ ಮಹಿಳೆಯರು ಪೊಲೀಸ್ ಠಾಣೆ ಎದುರು ಜಮಾವಣೆಗೊಂಡು ಆಕ್ರೋಶ ವ್ಯಕ್ತಪಡಿಸಿದರು.
ಎಸ್, ಫ್ಯಾಷನ್ ಡ್ರೆಸ್ ಹಾಕಿ ರೀಲ್ಸ್ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗದಗದ ಬಾಲಾಜಿ ನಗರದ ಮಹಿಳೆಯೊಬ್ಬರು, ಬುದ್ಧಿ ಹೇಳುವ ಬದಲು ತಮ್ಮದೇ ಸಮಾಜದ ಹೆಣ್ಣು ಮಕ್ಕಳಿಗೆ ಅಶ್ಲೀಲ ಪದಗಳಿಂದ ನಿಂದನೆ ಮಾಡಿದ ಆರೋಪದ ಮೇಲೆ ಎಸ್.ಎಸ್.ಕೆ ಸಮಾಜದ ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸ್.ಎಸ್.ಕೆ ಸಮಾಜದ ವಾಟ್ಸಪ್ ಗ್ರೂಪ್ಗಳಲ್ಲಿ ಅಶ್ಲೀಲ ಶಬ್ದಗಳ ನಿಂದನೆಯ ಆಡಿಯೋ ವೈರಲ್ ಆಗಿದ್ದು, ಗದಗ, ಹುಬ್ಬಳ್ಳಿ, ಬೆಂಗಳೂರು, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳ ಯುವತಿಯರು ಮತ್ತು ಮಹಿಳೆಯರು ರೊಚ್ಚಿಗೆದ್ದಿದ್ದಾರೆ. ಇದರ ಬೆನ್ನಲ್ಲೇ ಎಸ್.ಎಸ್.ಕೆ ಸಮಾಜದ ಮಹಿಳೆಯರು ಗದಗ ನಗರ ಪೊಲೀಸ್ ಠಾಣೆ ಎದುರು ಜಮಾವಣೆ ನಡೆಸಿ ಪ್ರತಿಭಟನೆ ನಡೆಸಿದರು.
ರೀಲ್ಸ್ ಮಾಡಿದ ಯುವತಿಯರ ವಿಡಿಯೋ ಹಾಗೂ ಫೋಟೋಗಳಿಗೆ ಟ್ಯಾಗ್ ಮಾಡಿ ನಿಂದನೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಗದಗನ ಮಹಿಳೆ ಈ ಆಡಿಯೋಗಳನ್ನು ಹಲವು ಜಿಲ್ಲೆಗಳ ವಾಟ್ಸಪ್ ಗ್ರೂಪ್ಗಳಿಗೆ ಶೇರ್ ಮಾಡಿದ್ದಾರೆ ಎನ್ನಲಾಗಿದ್ದು, ಇದಕ್ಕೆ ವಿರೋಧವಾಗಿ ಮಹಿಳೆಯರು ಅವರ ಮನೆಗೆ ತೆರಳಿ ಪ್ರಶ್ನಿಸಿದ್ದಾರೆ.
ಈ ವೇಳೆ ಹುಬ್ಬಳ್ಳಿಯಿಂದ ಬಂದ ಮಹಿಳೆಯ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪವೂ ಕೇಳಿಬಂದಿದೆ. ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಮಹಿಳೆಯರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದಾರೆ.



