ಗದಗ:- ತುಂಗಭ್ರದಾ ನದಿಯಲ್ಲಿ ಈಜಲು ತೆರಳಿದ್ದ ಮೂವರು ಯುವಕರು ನಾಪತ್ತೆಯಾಗಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಸೇತುವೆ ಬಳಿ ಜರುಗಿದೆ.
ಮದಲಗಟ್ಟಿ ಆಂಜನೇಯನ ದರ್ಶನ ಪಡೆದು ತುಂಗಭದ್ರಾ ನದಿಗೆ ಈಜಲು ಇಳಿದಾಗ ಈ ದುರ್ಘಟನೆ ಸಂಭವಿಸಿದೆ. ಶರಣಪ್ಪ ಬಡಿಗೇರ್ (34) ಮಹೇಶ್ ಬಡಿಗೇರ್ (36) ಗುರುನಾಥ್ ಬಡಿಗೇರ್ (38) ನಾಪತ್ತೆಯಾದವರು.
ಗದಗ ಜಿಲ್ಲೆ ಶಿರಹಟ್ಟಿಯಿಂದ ಐವರು ಸ್ನೇಹಿತರ ತಂಡ ಬಂದಿದ್ದರು. ಇವರಲ್ಲಿ ದೇವರ ದರ್ಶನ ಪಡೆದು ನದಿಯಲ್ಲಿ ಈಜಲು ಮೂವರು ತೆರಳಿದ್ದರು. ಬರ್ತ್ ಡೇ ಹಿನ್ನೆಲೆ ಸೇಹಿತರೊಂದಿಗೆ ಶರಣಪ್ಪ ಬಡಿಗೇರ್ ದೇವಸ್ಥಾನಕ್ಕೆ ಬಂದಿದ್ದರು ಎನ್ನಲಾಗಿದೆ. ಈಜಲು ಬಾರದಿದ್ದರೂ ಮೊದಲಿಗೆ ಶರಣಪ್ಪ ಬಡಿಗೇರ್ ನದಿಗೆ ಇಳಿದಿದ್ದರು. ಈ ವೇಳೆ ಈಜಲು ಬಾರದೆ ಇದ್ದಾಗ ನದಿಯಲ್ಲಿ ಶರಣಪ್ಪ ಕೊಚ್ಚಿ ಹೋಗಿದ್ದಾನೆ. ಕೂಡಲೇ ಶರಣಪ್ಪನನ್ನ ರಕ್ಷಿಸಲು ಮಹೇಶ್, ಗುರುನಾಥ್ ಎಂಬುವವರು ನದಿಗೆ ಇಳಿದಿದ್ದಾರೆ. ಈ ವೇಳೆ ಮೂವರು ನದಿಯಲ್ಲಿ ಕೊಚ್ಚಿಹೋಗಿ ನಾಪತ್ತೆ ಆಗಿದ್ದಾರೆ.
ನದಿಯಲ್ಲಿ ನಾಪತ್ತೆಯಾಗಿರುವ ಮೂವರಿಗಾಗಿ ಹುಡುಕಾಟ ನಡೆಸಲಾಗಿದೆ. ಕೂಡಲೇ ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಮೀನುಗಾರರ ಸಹಾಯದೊಂದಿಗೆ ನದಿಯಲ್ಲಿ ಶೋಧಕಾರ್ಯ ನಡೆಸಿದ್ದಾರೆ.
ವಿಜಯನಗರ ಜಿಲ್ಲೆ ಹೂವಿನ ಹಡಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.