ವಿಜಯಸಾಕ್ಷಿ ಸುದ್ದಿ, ಗದಗ: ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಜೆನ್-ಝಡ್ ಯುವಕರ ಹೋರಾಟ ದೇಶದ ಗಮನ ಸೆಳೆದ ಬೆನ್ನಲ್ಲೇ, ಅದೇ ಮಾದರಿಯಲ್ಲಿ ಗದಗ ಜಿಲ್ಲೆಯ ಯುವಪಡೆಯೂ ಹೋರಾಟದ ಹಾದಿ ಹಿಡಿದಿದೆ. ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಬೇಕು, ಗದಗ–ಬೆಟಗೇರಿ ಅವಳಿ ನಗರಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಸಬೇಕು ಹಾಗೂ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು ಎಂಬ ಪ್ರಮುಖ ಬೇಡಿಕೆಗಳೊಂದಿಗೆ ‘ರಕ್ತ ಸಹಿ ಅಭಿಯಾನ’ ಆರಂಭವಾಗಿದೆ.
ಗದಗ–ಬೆಟಗೇರಿ ಅವಳಿ ನಗರದ ಜೆನ್-ಝಡ್ ಮತದಾರರು ಮತ್ತು ನಾಗರಿಕರ ವೇದಿಕೆ ನೇತೃತ್ವದಲ್ಲಿ ಆರಂಭವಾಗಿರುವ ಅಭಿಯಾನದಲ್ಲಿ 13 ಸಾವಿರಕ್ಕೂ ಹೆಚ್ಚು ಯುವಕರು ರಕ್ತದ ಮೂಲಕ ಸಹಿ ಹಾಕುವ ಗುರಿಯೊಂದಿಗೆ ಬೀದಿಗಿಳಿದಿದ್ದಾರೆ. ನಗರದ ಪ್ರತಿಯೊಂದು ವಾರ್ಡ್ಗೂ ತೆರಳಿ ಸಹಿ ಸಂಗ್ರಹಿಸಲಾಗುತ್ತಿದ್ದು, ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಜಿಲ್ಲೆಯ ಏಳು ತಾಲೂಕುಗಳಲ್ಲೂ ಬರದ ಛಾಯೆ ಆವರಿಸಿದೆ ಎಂಬುದು ಯುವಕರ ಆರೋಪ. ಕೃಷಿಯನ್ನೇ ಪ್ರಮುಖವಾಗಿ ಅವಲಂಬಿಸಿರುವ ಜಿಲ್ಲೆಯ ಜನರು ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಿದ್ದರೂ ಗದಗವನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಲು ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಡಿಯುವ ನೀರಿಗೆ ದಶಕಗಳ ಬೇಡಿಕೆ
ಗದಗ–ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಲವು ವರ್ಷಗಳಿಂದ ಮುಂದುವರಿದಿದೆ. ಸಮರ್ಪಕ ಹಾಗೂ ನಿರಂತರ ಕುಡಿಯುವ ನೀರು ಪೂರೈಕೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಯುವಕರ ಪ್ರಮುಖ ಆಗ್ರಹವಾಗಿದೆ.
ಇದರ ಜತೆಗೆ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಕೈಗಾರಿಕೆಗಳ ಕೊರತೆಯಿಂದ ವಿದ್ಯಾವಂತ ಯುವಕರು ಉದ್ಯೋಗಕ್ಕಾಗಿ ಬೆಂಗಳೂರು, ಹುಬ್ಬಳ್ಳಿ–ಧಾರವಾಡ ಸೇರಿದಂತೆ ವಿವಿಧ ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂದು ಅಭಿಯಾನಕಾರರು ಒತ್ತಾಯಿಸಿದ್ದಾರೆ.
40 ಸಾವಿರ ರಕ್ತ ಸಹಿ ಸಂಗ್ರಹದ ಗುರಿ
ಯುವ ಮುಖಂಡ ಅನಿಲ್ ಮೆಣಸಿನಕಾಯಿ ಅವರ ಮಾರ್ಗದರ್ಶನದಲ್ಲಿ ಆರಂಭವಾಗಿರುವ ಅಭಿಯಾನದಲ್ಲಿ ಸ್ವಯಂಪ್ರೇರಿತರಾಗಿ ಜಿಲ್ಲೆಯಾದ್ಯಂತ ಒಟ್ಟು 40 ಸಾವಿರ ರಕ್ತ ಸಹಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಸಂಗ್ರಹಿಸಿದ ಸಹಿಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಬೇಡಿಕೆಗಳು ಈಡೇರದಿದ್ದರೆ ಹೋರಾಟ ತೀವ್ರ?
ಜಿಲ್ಲೆಯ ಸುಮಾರು ಶೇ.80ರಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದು, ಪ್ರಸಕ್ತ ಬರ ಪರಿಸ್ಥಿತಿಯಿಂದ ರೈತರು ಹಾಗೂ ಗ್ರಾಮೀಣ ಜನತೆ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಬರಪೀಡಿತ ಜಿಲ್ಲೆ ಎಂದು ಘೋಷಿಸಿ ಅಗತ್ಯ ಪರಿಹಾರ ಕ್ರಮ ಕೈಗೊಳ್ಳಬೇಕು. ಯುವಕರಿಗೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಲು ಕೈಗಾರಿಕೆಗಳಿಗೆ ಉತ್ತೇಜನ ನೀಡಬೇಕು ಎಂಬುದು ಜೆನ್-ಝಡ್ ಯುವಪಡೆಯ ಆಗ್ರಹವಾಗಿದೆ.
ರಕ್ತದಲ್ಲಿ ಸಹಿ ಹಾಕಿ ಸರ್ಕಾರದ ಗಮನ ಸೆಳೆಯುತ್ತಿರುವ ಯುವಕರ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತದೆಯೇ? ಇಲ್ಲವೇ ಹೋರಾಟ ಮತ್ತಷ್ಟು ತೀವ್ರಗೊಳ್ಳುತ್ತದೆಯೇ? ಎಂಬುದು ಇದೀಗ ಕುತೂಹಲ ಮೂಡಿಸಿದೆ.
“ಒಂದು ಕಡೆ ಬರದ ಸಂಕಷ್ಟ, ಮತ್ತೊಂದೆಡೆ ಉದ್ಯೋಗದ ಕೊರತೆ. ಯುವಕರು ವಲಸೆ ಹೋಗುವುದನ್ನು ತಪ್ಪಿಸಲು ಸರ್ಕಾರ ತಕ್ಷಣ ಸ್ಪಂದಿಸಬೇಕು. ನಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಯಲಿದೆ.”
— ಆನಂದ ಅಂಗಡಿ, ವಿದ್ಯಾರ್ಥಿ ಮುಖಂಡ
“ಗದಗದ ಅಭಿವೃದ್ಧಿಗಾಗಿ ನಡೆಯುತ್ತಿರುವ ರಕ್ತದ ಸಹಿ ಅಭಿಯಾನ ಉತ್ತಮ ನಿರ್ಧಾರ. ಗದಗ ಜನತೆಯ ಮೂಲಸೌಕರ್ಯಕ್ಕಾಗಿ ಹಲವು ಬಾರಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಜನತೆಯ ಹಕ್ಕುಗಳಿಗಾಗಿ ಜೆನ್-ಝಡ್ ಯುವಕರು ರಕ್ತದಲ್ಲಿ ಸಹಿ ಸಂಗ್ರಹಿಸುತ್ತಿರುವುದು ಕೊನೆಯ ಹೋರಾಟವಾಗಿದೆ.”
— ರಾಣಿ ಚಂದಾವರಿ, ಸಂಯುಕ್ತ ನೈತಿಕ ಮಾನವ ಹಕ್ಕುಗಳ ರಾಜ್ಯಾಧ್ಯಕ್ಷರು



