ಗದಗ:- ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿದೆ. ಬೇಸಿಗೆಯಲ್ಲಿ ಬಿಸಿಲಿನಿಂದ ಹೈರಾಣಾಗಿರುವ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಆದರೆ ಗದಗ ಗಲ್ಲೆಯಲ್ಲಿ ಸುರಿದ ಭಾರೀ ಗಾಳಿ-ಮಳೆಗೆ ಅನಾಹುತ ಸೃಷ್ಟಿಯಾಗಿದೆ. ಪಪ್ಪಾಯ ಹಾಗೂ ಮಾವಿನ ಫಸಲಿಗೆ ಭಾರಿ ಹಾನಿಯಾಗಿದ್ದು, ಲಾಭದ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದಾರೆ. ಈ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಕುಂಟೋಜಿ ಹಾಗೂ ಮ್ಯಾಕಲಝಲರಿ ಗ್ರಾಮದಲ್ಲಿ ಜರುಗಿದೆ.
ನೆಲಕ್ಕುರುಳಿದ ಪಪ್ಪಾಯಿ ಹಣ್ಣುಗಳು:-
ಕುಂಟೋಜಿ ಗ್ರಾಮದ ರೈತ ಮಲ್ಲಿಕಾರ್ಜುನ ಗೋನಾಳ ಅವರು ಬೆಳೆದಿದ್ದ ಪಪ್ಪಾಯಿ ಹಣ್ಣುಗಳು ಭಾರೀ ಗಾಳಿ-ಮಳೆಗೆ ನೆಲಕ್ಕುರುಳಿದೆ. ಘಟನೆಯಿಂದ ರೈತ ಕಂಗಾಲಾಗಿದ್ದಾನೆ. ಮಲ್ಲಿಕಾರ್ಜುನ ಗೋನಾಳ ಅವರು, ಸಾಲ ಸೋಲ ಮಾಡಿ ಸುಮಾರು ಲಕ್ಷಾನುಗಟ್ಟಲೇ ಖರ್ಚು ಮಾಡಿ 2 ಎಕರೆಯಲ್ಲಿ 1800 ಪಪ್ಪಾಯ ಗಿಡ ಬೆಳೆದಿದ್ದರು. ಆದರೆ ಮಳೆಯ ಅವಾಂತರದಿಂದ ಪಪ್ಪಾಯಿ ಸಂಪೂರ್ಣ ಹಾನಿ ಆಗಿದ್ದು, ರೈತ ಕಣ್ಣೀರು ಹಾಕುವಂತಾಗಿದೆ.
ಕಟಾವಿಗೆ ಬಂದಿದ್ದ ಮಾವು ಹಾನಿ!
ಇನ್ನೂ ಮತ್ತೊಂದೆಡೆ ಕಟಾವಿಗೆ ಬಂದಿದ್ದ ಮಾವು ಸಂಪೂರ್ಣ ಹಾನಿಯಾಗಿದೆ. ಮ್ಯಾಕಲಝರಿ ಗ್ರಾಮದ ವೀರಯ್ಯ ಕಾರಡಗಿಮಠ ಎಂಬ ರೈತ ಮಾವು ಬೆಳೆ ಬೆಳೆದಿದ್ದ. ಇನ್ನೇನೂ ಕಟಾವು ಮಾಡಬೇಕು ಎನ್ನುವಷ್ಟರಲ್ಲಿ ರಕ್ಕಸ ಗಾಳಿ-ಮಳೆಗೆ ಮಾವು ಸಂಪೂರ್ಣ ಹಾನಿಯಾಗಿದೆ. ಈ ರೈತ, ಸುಮಾರು 8 ಎಕರೆ ಜಮೀನಿನಲ್ಲಿ ಮಾವು ಬೆಳೆದಿದ್ದ. ಇದೀಗ ಹಾನಿಯಾಗಿದ್ದು, ರೈತನ ಸ್ಥಿತಿ ದಿಕ್ಕೇ ತೋಚದಂತಾಗಿದೆ.
ಪರಿಹಾರಕ್ಕೆ ಆಗ್ರಹ:
ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಸುರಿದ ದಾರಾಕಾರ ಗಾಳಿ-ಮಳೆಗೆ ಪಪ್ಪಾಯಿ, ಮಾವು ಹಾನಿ ಆಗಿದ್ದು, ಉತ್ತಮ ಆದಾಯ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದಾರೆ. ಇನ್ನೂ ಘಟನೆ ನಡೆದು ಎರಡು ದಿನಗಳಾದ್ರೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡದೆ ನಿರ್ಲಕ್ಷ್ಯ ತೋರಿದ್ದು, ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೇ ರಾಜ್ಯ ಸರ್ಕಾರ ನೆರವಿಗೆ ಬರಬೇಕು. ಹಾನಿಯಾದ ತೋಟಗಾರಿಕೆ ಬೆಳೆಗೆ ಪರಿಹಾರ ನೀಡಬೇಕೆಂದು ರೈತರು ಒತ್ತಾಯ ಮಾಡಿದ್ದಾರೆ.



