ಗದಗ: ಮೋಜಿನಿ ಆನ್‌ಲೈನ್ ಅರ್ಜಿ ಅಪ್‌ಲೋಡ್ ಮಾಡುವುದಕ್ಕಾಗಿ ₹3,000 ಲಂಚ ಬೇಡಿಕೆ ಇಟ್ಟಿದ್ದ ಖಾಸಗಿ (ಕಾಂಟ್ರಾಕ್ಟ್) ಕಂಪ್ಯೂಟರ್ ಆಪರೇಟರ್ ನನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಬೆಟಗೇರಿ ನಾಡಕಚೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಸುರೇಶ ಹಂಚಿನಾಳ ಎಂಬಾತ, ದೂರುದಾರರಿಂದ ₹3,000 ಲಂಚವನ್ನು ಬೇಡಿಕೆ ಇಟ್ಟಿದ್ದ. ಹಣವನ್ನು ತನ್ನ ಸ್ನೇಹಿತನ PhonePe/Google Pay ಖಾತೆಗೆ ವರ್ಗಾಯಿಸಿದ ನಂತರ ಅರ್ಜಿ ಅಪ್‌ಲೋಡ್ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾನೆ.
ಘಟನೆಯ ವಿವರ: ಗದಗ ಜಿಲ್ಲೆಯ ಅಡವಿಸೋಮಾಪುರ ಗ್ರಾಮದ ಎಲ್‌ಎಲ್‌ಬಿ ವಿದ್ಯಾರ್ಥಿ ನಾಗಾರ್ಜುನ ಕೆ. ಕೋರಿ ಲಂಚ ಬೇಡಿಕೆಯ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ದೂರು ಸ್ವೀಕರಿಸಿದ ಲೋಕಾಯುಕ್ತ ಸಿಬ್ಬಂದಿ ಟ್ರ್ಯಾಪ್ ಕಾರ್ಯಾಚರಣೆ ರೂಪಿಸಿ, ಹಣ ವರ್ಗಾವಣೆಯಾದ ಕ್ಷಣದಲ್ಲೇ ಆಪರೇಟರ್ ಸುರೇಶ ಹಂಚಿನಾಳನನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಕ್ರೈಂ ನಂ. 10/2025ರ ಅಡಿಯಲ್ಲಿ, ಲಂಚ ಪ್ರತಿಬಂಧಕ ಕಾಯ್ದೆ 1988ರ ಕಲಂ 7(ಎ) ಪ್ರಕರಣ ದಾಖಲಾಗಿದೆ.ಟ್ರ್ಯಾಪ್ ಕಾರ್ಯಾಚರಣೆಯ ನೇತೃತ್ವವನ್ನು ಪೋಲೀಸ್ ಇನ್ಸ್‌ಪೆಕ್ಟರ್ ಎಸ್.ಎಸ್. ತೇಲಿ ವಹಿಸಿದ್ದರು.
ಧಾರವಾಡ ಲೋಕಾಯುಕ್ತ ಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ, ಗದಗ ಡಿವೈಎಸ್‌ಪಿ ವಿಜಯ ಬಿರಾದಾರ, ಪೊಲೀಸ್ ಇನ್ಸ್‌ಪೆಕ್ಟರ್ ಪರಮೇಶ್ವರ ಜಿ. ಕವಟಗಿ ಹಾಗೂ ಸಿಬ್ಬಂದಿ ತಂಡ ಕಾರ್ಯಾಚರಣೆಯಲ್ಲಿ ಇದ್ದರು.
ಸರ್ಕಾರಿ ಕಚೇರಿಗಳಲ್ಲಿ ಅಥವಾ ಅಧಿಕಾರಿಗಳಿಂದ ಲಂಚಕ್ಕೆ ಬೇಡಿಕೆ ಇಟ್ಟಲ್ಲಿ ತಕ್ಷಣ ಗದಗ ಜಿಲ್ಲಾ ಲೋಕಾಯುಕ್ತ ಕಚೇರಿಗೆ ದೂರು ನೀಡಬೇಕು ಎಂದು ಸಾರ್ವಜನಿಕರಿಗೆ ಲೋಕಾಯುಕ್ತ ಅಧಿಕಾರಿಗಳು ಮನವಿ ಮಾಡಿದ್ದಾರೆ.



