ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಹಾವೇರಿ-ಗದಗ ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯಗಳು ನಡೆಯುತ್ತಿದ್ದು, ಮತದಾನಕ್ಕೆ ಕ್ಷಣಗಣನೆ ಶುರುವಾಗಿರುವ ಹಿನ್ನೆಲೆಯಲ್ಲಿ ಹಾವೇರಿ-ಗದಗ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ತಮ್ಮ ತವರು ನೆಲದಲ್ಲಿ ಶುಕ್ರವಾರ ಬಿರುಸಿನ ಮತ ಪ್ರಚಾರ ನಡೆಸಿದರು.
ಅಭ್ಯರ್ಥಿ ಆನಂದಸ್ವಾಮಿ ಪಕ್ಷದ ಮುಖಂಡರ ಜೊತೆಗೆ ತೆರೆದ ವಾಹನದಲ್ಲಿ ಸಾಗಿ ಬರುತ್ತಿದ್ದರೆ, ತಂದೆ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ರೋಡ್‌ಶೋನಲ್ಲಿ ಕಾಲ್ನಡಿಗೆಯಲ್ಲಿಯೇ ಸಾಗಿದರು. ಆನಂದಸ್ವಾಮಿ ಗಡ್ಡದೇವರಮಠರ ತಾಯಿ ಜಯಲಕ್ಷ್ಮಿ ಗಡ್ಡದೇವರಮಠ ಮಹಿಳಾ ಬೆಂಬಲಿಗರೊಂದಿಗೆ ಕ್ಷೇತ್ರದಲ್ಲಿ ನಿರಂತರ ಪ್ರಚಾರದಲ್ಲಿ ತೊಡಗಿದ್ದು, ನಿತ್ಯ ನೂರಾರು ಕಿ.ಮೀಗಳ ಪ್ರವಾಸ ಮಾಡುತ್ತಾ ಮತದಾರರ ಮನವೊಲಿಸುವ ಕಾರ್ಯ ಮಾಡುತ್ತಿದ್ದಾರೆ. ಶುಕ್ರವಾರ ನಡೆದ ಬೃಹತ್ ರೋಡ್‌ಶೋನಲ್ಲಿ ಜಯಲಕ್ಷ್ಮಿಯವರು ಬಿಸಿಲಿನ ಶಾಖದ ನಡುವೆಯೂ ಜನರೊಂದಿಗೆ ಸಾಗುತ್ತ ಬಂದರು.