ವಿಜಯಸಾಕ್ಷಿ ಸುದ್ದಿ, ಗದಗ: ಪರಂಪರೆಯಂತೆ ನವರಾತ್ರಿಯ ಸಂದರ್ಭದಲ್ಲಿ ಶಕ್ತಿದೇವಿಯ ಆರಾಧನೆ ಮಾಡುವ ಮೂಲಕ ದೈವೀಶಕ್ತಿಯನ್ನು ಪಡೆದು ಪಾವನರಾಗಬೇಕು ಎಂದು ನರಗುಂದ ದೊರೆಸ್ವಾಮಿಮಠ ಹಾಗೂ ಶಿರೋಳ ತೋಂಟದಾರ್ಯ ಶಾಖಾಮಠದ ಶ್ರೀಶಾಂತಲಿಂಗ ಮಹಾಸ್ವಾಮಿಗಳು ಹೇಳಿದರು.
ನಗರದ ಮುಳಗುಂದನಾಕಾ ಬಳಿಯ ಶ್ರೀ ಅಡವೀಂದ್ರಸ್ವಾಮಿ ಮಠದಲ್ಲಿ ದಸರಾ ಮಹೋತ್ಸವ ಮತ್ತು ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಅಡವೀಂದ್ರಸ್ವಾಮಿ ಮಠದಲ್ಲಿ ಕಳೆದ ಹಲವಾರು ವರ್ಷಗಳಿಂದ ನವರಾತ್ರಿಯ ಸಂದರ್ಭದಲ್ಲಿ ಶ್ರೀಅನ್ನಪೂರ್ಣೆಶ್ವರಿಯ ವಿಶೇಷ ಪೂಜೆಯೊಂದಿಗೆ ಶಕ್ತಿದೇವಿಯ ಆರಾಧನೆ ಮಾಡಲಾಗುತ್ತಿದ್ದು,ಪ್ರಸ್ತುತ ವರ್ಷ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಸದಾಶಿವಯ್ಯ ಮದರಿಮಠ ಅವರ ತಂಡದ ನೇತೃತ್ವದಲ್ಲಿ ಅದ್ಧೂರಿಯಿಂದ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಶ್ರೀಗಳು ಹೇಳಿದರು.
ಶ್ರೀ ಅಡವೀಂದ್ರ ಸ್ವಾಮಿಮಠದ ಧರ್ಮದರ್ಶಿಗಳಾದ ಮಹೇಶ್ವರ ಸ್ವಾಮೀಜಿ ಸಮ್ಮುಖದಲ್ಲಿ ಲಿಂ. ಶ್ರೀ ಶಿವಮೂರ್ತೆಪ್ಪ ಎಸ್.ಬಳಿಗಾರ ಅವರ ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು. ಶ್ರೀದೇವಿಗೆ ಹಾಗೂ ಮುತ್ತೈದೆಯರಿಗೆ ಅರಿಷಿಣ-ಕುಂಕುಮ, ಬಳೆ ಸೇವೆ ನೆರವೇರಿಸಲಾಯಿತು.
ಶ್ರೀ ಅನ್ನಪೂರ್ಣೇಶ್ವರಿದೇವಿ ಜಾತ್ರಾ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಎಸ್.ಪಿ. ಸಂಶಿಮಠ, ಅಧ್ಯಕ್ಷರಾದ ಸದಾಶಿವಯ್ಯ ಮದರಿಮಠ, ಪ್ರಧಾನ ಕಾರ್ಯದರ್ಶಿ ಶರಣಬಸಪ್ಪ ಗುಡಿಮನಿ, ಮಹಿಳಾ ಸಮಿತಿ ಅಧ್ಯಕ್ಷರಾದ ಸುವರ್ಣಾ ಮದರಿಮಠ ಮುಂತಾದ ಗಣ್ಯರು ವೇದಿಕೆಯಲ್ಲಿದ್ದರು.
ಶ್ರೀ ಅನ್ನಪೂರ್ಣೇಶ್ವರ ಸನ್ನಿಧಿಯಲ್ಲಿ ಡಾ. ರಾಜಗುರು ಗುರುಸ್ವಾಮಿ ಕಲಕೇರಿ ಅವರಿಂದ ಪುರಾಣ ಪ್ರವಚನ ನಡೆಯಿತು. ಚನ್ನಬಸಯ್ಯ ಶಾಸ್ತ್ರಿಗಳು ಹೇಮಗಿರಿಮಠ ಪುರಾಣ ಪಠಿಸಿದರು. ಪಕ್ರುಸಾಬ ಮುಲ್ಲಾ, ಜಗನ್ನಾಥ ಕಲಬುರಗಿ, ಶರಣಕುಮಾರ ಗುತ್ತರಗಿ, ಎಸ್.ಬಿ. ಭಜಂತ್ರಿ ಸಂಗೀತ ಸೇವೆ ನೀಡಿದರು.
ಪೂಜಾ ಸಮಿತಿ ಅಧ್ಯಕ್ಷರಾದ ಶರಣಯ್ಯಸ್ವಾಮಿ ಶಿವಪ್ಪಯ್ಯನಮಠ, ವೀರೇಶ್ವರ ಸ್ವಾಮಿಗಳು ಹೊಸಳ್ಳಿಮಠ, ಜಾತ್ರಾ ಮಹೋತ್ಸವ ಸಮಿತಿ ಕಾರ್ಯದರ್ಶಿ ಗೀತಾ ಎಂ. ಹೂಗಾರ, ಸಹ ಕಾರ್ಯದರ್ಶಿ ಸುಷ್ಮಾ ಖಂಡಪ್ಪಗೌಡ್ರ, ಕೋಶಾಧ್ಯಕ್ಷರಾದ ಅಶ್ವಿನಿ ನೀಲಗುಂದ, ವಿ.ಎಚ್. ದೇಸಾಯಿಗೌಡ್ರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಪ್ರಸಾದ ಹಾಗೂ ಇತರೆ ಭಕ್ತಿಸೇವೆ ವಹಿಸಿದ್ದ ಗಣ್ಯರನ್ನು ಗುರುರಕ್ಷೆ ನೀಡಿ ಗೌರವಿಸಲಾಯಿತು.
ಭೂಮಿಕಾ ಹೊಸಳ್ಳಿಮಠ ನೃತ್ಯ ಪ್ರದರ್ಶಿಸಿದರು. ವಿರೂಪಾಕ್ಷಯ್ಯ ಹೊಸಳ್ಳಿಮಠ ಕೊಳಲುವಾದನ ಪ್ರಸ್ತುತಪಡಿಸಿದರು. ವಿಜಯಲಕ್ಷ್ಮಿ ಹೊಸಳ್ಳಿಮಠ ಸ್ವಾಗತಿಸಿದರು. ವಿ.ಎಂ. ಕುಂದ್ರಾಳಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ ಧರ್ಮಾಯತ ವಂದಿಸಿದರು.
ಕಾರ್ಯಕ್ರಮದಲ್ಲಿ ಗಣ್ಯ ಉದ್ಯಮಿಗಳಾದ ವಿನಾಯಕ ತೇಜಪ್ಪಗೌಡ ಪಾಟೀಲ ಹಾಗೂ ಬಸವರಾಜ ಶಿವಪ್ಪ ಅಂಗಡಿ ಅವರಿಗೆ ಶ್ರೇಷ್ಠ ಉದ್ಯಮಶ್ರೀ ಪ್ರಶಸ್ತಿ, ಕೆಇಬಿ ನಿವೃತ್ತ ಅಧಿಕಾರಿ ಜಿ.ಎಂ. ಯಾನಮಶೆಟ್ಟಿ ಅವರಿಗೆ ಸಮಾಜಸೇವಾ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು. ತೆರಿಗೆ ಸಲಹೆಗಾರರಾದ ಶ್ರೀಶೈಲ ಎಸ್.ಬಳಿಗಾರ ಅವರಿಗೆ ಗುರುಶ್ರೀ ರಕ್ಷೆ ನೀಡಿ ಸನ್ಮಾನಿಸಲಾಯಿತು.


