ಕಲಿಕೆಯ ಅವಧಿಯಲ್ಲಿ ಉತ್ತಮ ಜ್ಞಾನ ಹೊಂದಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳೇ ನಮ್ಮ ದೇಶದ ಭವ್ಯ ಭವಿಷ್ಯವಾಗಿದ್ದಾರೆ. ಓದುವ ಹಂತದಲ್ಲಿ ಉತ್ತಮವಾಗಿ ಅಧ್ಯಯನ ಮಾಡಿ ಜೀವನದಲ್ಲಿ ಯಶಸ್ಸು ನಿಮ್ಮದಾಗಿಸಿಕೊಳ್ಳಿ ಎಂದು ರಾಜ್ಯದ ಕಾನೂನು, ಶಾಸನ ರಚನೆ, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಕರೆ ನೀಡಿದರು.

Advertisement

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಶನಿವಾರ ಮಲ್ಲಸಮುದ್ರದ ಮೊರಾರ್ಜಿ ದೇಸಾಯಿ ವಸತಿಯುತ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ 2024-25ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗುದು ಬಹುಮಾನ ವಿತರಿಸಿ ಸಚಿವರು ಮಾತನಾಡಿದರು.

ಭಾರತದ ಭವ್ಯ ಭವಿಷ್ಯ ನಿರ್ಮಾಣದಲ್ಲಿ ಇಂದಿನ ಯುವ ಪೀಳಿಗೆ, ವಿದ್ಯಾರ್ಥಿಗಳ ಪಾತ್ರ ಅಪಾರವಿದೆ. ಕಲಿಯುವ ಅವಧಿಯನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಜ್ಞಾನ ಹೊಂದಿ. ಮೊರಾರ್ಜಿ ದೇಸಾಯಿಯವರು ಇಂದಿನ ಬಾಂಬೆ ರಾಜ್ಯದ ಮುಖ್ಯಮಂತ್ರಿಗಳಾಗಿ, ಆರ್ಥಿಕ ಸಚಿವರಾಗಿ ಅಲ್ಲದೆ ದೇಶದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದಾರೆ. ತಮ್ಮ ಆಡಳಿತ ಅವಧಿಯಲ್ಲಿ ಅನೇಕ ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಸುಭದ್ರ ರಾಷ್ಟ್ರಕ್ಕಾಗಿ ಕಾರ್ಯನಿರ್ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ನಿರಂತರವಾಗಿ ಪ್ರಾಮಾಣಿಕ ಪ್ರಯತ್ನ ಇದ್ದಲ್ಲಿ ಯಶಸ್ಸು ನಿಮ್ಮದಾಗಲಿದೆ. ಶೇ. 85ಕ್ಕಿಂತ ಅಧಿಕ ಫಲಿತಾಂಶ ಪಡೆಯುವದು ಸಣ್ಣ ಮಾತಲ್ಲ. ಎಲ್ಲರೂ ಉತ್ತಮ ಸಾಧನೆಗೈದಿದ್ದೀರಿ ಎಂದರಲ್ಲದೆ, ಇದಕ್ಕೆ ಕಾರಣರಾದ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿಗಳಿಗೆ ಅಭಿನಂದನೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಉತ್ತಮ ಫಲಿತಾಂಶಕ್ಕೆ ಕಾರಣರಾದ ಮಲ್ಲಸಮುದ್ರ ಪದವಿಪೂರ್ವ ಕಾಲೇಜಿನ ಬೋಧಕ ಸಿಬ್ಬಂದಿಗಳನ್ನು ಸಚಿವರು ಸನ್ಮಾನಿಸಿದರು. ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ರವಿ ಗುಂಜೀಕರ, ಸಿದ್ದು ಪಾಟೀಲ ಸೇರಿದಂತೆ ಕಾಲೇಜಿನ ಪ್ರಾಚಾರ್ಯರು, ಅಸುಂಡಿ ಗ್ರಾ.ಪಂ ಅಧ್ಯಕ್ಷರು, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

“2024-25ನೇ ಸಾಲಿನಲ್ಲಿ ಮಲ್ಲಸಮುದ್ರ ಶಾಲೆಯಲ್ಲಿ 80 ವಿದ್ಯಾರ್ಥಿಗಳ ಪೈಕಿ 43 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆಯುವ ಮೂಲಕ ಸರ್ಕಾರದ 10 ಸಾವಿರ ರೂ ನಗದು ಬಹುಮಾನಕ್ಕೆ ಭಾಜನರಾಗಿದ್ದೀರಿ. ಅಲ್ಲದೆ, ಶೇ. 100ರಷ್ಟು ಫಲಿತಾಂಶ ಪಡೆದಿದ್ದು ಅಭಿನಂದನೀಯ. ರಾಜ್ಯದ ಕ್ರೈಸ್ ಸಂಸ್ಥೆಯಯಡಿ 78 ಕಾಲೇಜುಗಳಿದ್ದು, ಮಲ್ಲಸಮುದ್ರದ ಕಾಲೇಜು ರಾಜ್ಯದಲ್ಲಿಯೇ 3ನೇ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯ. ಮುಂದಿನ ವರ್ಷ ಇಲ್ಲಿ ಕಲಿಯುವ ಎಲ್ಲ ಮಕ್ಕಳು ಸಹ ಡಿಸ್ಟಿಂಕ್ಷನ್ ಪಡೆದು ಉತ್ತೀರ್ಣರಾಗಬೇಕು. ಈ ನಿಟ್ಟಿನಲ್ಲಿ ಕಾಲೇಜಿನ ಬೋಧಕ ಸಿಬ್ಬಂದಿ ಕಾರ್ಯನಿರ್ವಹಿಸುವಂತಾಗಲಿ”

– ಎಚ್.ಕೆ. ಪಾಟೀಲ.

ಜಿಲ್ಲಾ ಉಸ್ತುವಾರಿ ಸಚಿವರು.


Spread the love

LEAVE A REPLY

Please enter your comment!
Please enter your name here