ವಿಜಯಸಾಕ್ಷಿ ಸುದ್ದಿ, ಗದಗ: ಬ್ರಿಟಿಷರ ಆಳ್ವಿಕೆಯ ವಿರುದ್ಧ ಹಿಂದೂ ಸಮಾಜದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕ್‌ರ ನೇತೃತ್ವದಲ್ಲಿ ಪ್ರಾರಂಭಗೊಂಡ ಸಾರ್ವಜನಿಕ ಗಜಾನನ ಪ್ರತಿಷ್ಠಾಪನಾ ಮಂಡಳಿಗಳು ಇಂದು ಸಮಾಜಮುಖಿ ಕಾರ್ಯಗಳ ಮೂಲಕ ಗಮನ ಸೆಳೆಯುತ್ತಿರುವುದು ಪ್ರಶಂಸನೀಯ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ. ಸಂಕನೂರ ಹೇಳಿದರು.
ಅವರು ಬುಧವಾರ ಸಂಜೆ ಗದಗ ನಗರದ ವೀರಶೈವ ಲೈಬ್ರರಿ ಬಳಿ ಸುದರ್ಶನ ಚಕ್ರ ಯುವ ಮಂಡಳ ಹಾಗೂ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನಾ ಸಮಿತಿ ವತಿಯಿಂದ ಪ್ರತಿಷ್ಠಾಪನೆಗೊಂಡ ಗಜಾನನ ವೇದಿಕೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಮೊಟ್ಟಮೊದಲ ಸಾರ್ವಜನಿಕ ಗಜಾನನೋತ್ಸವ ಬೆಳಗಾವಿಯಲ್ಲಿ ಪ್ರಾರಂಭವಾಗಿದ್ದು, ಇಂದು ಪ್ರತಿ ದೇವರನ್ನೂ ಒಂದೊಂದು ಜಾತಿಗೆ ಸೀಮಿತಗೊಳಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಎಲ್ಲರಲ್ಲಿಯೂ ಜಾತಿ, ಭೇದ-ಭಾವವಿಲ್ಲದೇ ಹಿಂದೂ ಸಮಾಜ ಒಗ್ಗಟ್ಟಾಗಿ ವಿಜೃಂಭಣೆಯಿಂದ ಆಚರಿಸುವ ಹಬ್ಬ ಯಾವುದಾದರೂ ಇದ್ದಲ್ಲಿ ಅದು ಸರ್ವರ ಇಷ್ಟಾರ್ಥಸಿದ್ಧಿ ಗಣೇಶ ಚತುರ್ಥಿಯಾಗಿದೆ.
ಸುದರ್ಶನ ಚಕ್ರ ಯುವ ಮಂಡಳ ಹಾಗೂ ಹಿಂದೂ ಮಹಾಗಣಪತಿ ಪ್ರತಿಷ್ಠಾಪನಾ ಸಮಿತಿ ವತಿಯಿಂದ ಲಕ್ಷ ದೀಪೋತ್ಸವ, ಧರ್ಮಸಭೆ, ಗಣಹೋಮ ಮುಂತಾದ ಕಾರ್ಯಕ್ರಮಗಳು ಜರುಗುತ್ತಿದ್ದು, ಈ ರೀತಿಯ ಸಾಮಾಜಿಕ, ಧಾರ್ಮಿಕ ಚಿಂತನೆಗಳು ಯುವಪೀಳಿಗೆಯಲ್ಲಿ ಭಕ್ತಿಭಾವ ಹಾಗೂ ದೇಶಪ್ರೇಮ ಬೆಳೆಸಲು ಪೂರಕವಾಗಿವೆ ಎಂದರು.
ಈ ಸಂದರ್ಭದಲ್ಲಿ ಗಜಾನನೋತ್ಸವ ಸಮಿತಿಯ ಗೌರವಾಧ್ಯಕ್ಷ ಶ್ರೀಕಾಂತ ಖಟವಟೆ, ಅಧ್ಯಕ್ಷ ರವಿರಾಜ ಮಾಳೇಕೊಪ್ಪಮಠ, ಕೃಷ್ಣಗೌಡ ಪಾಟೀಲ, ಸುಧೀರ ಕಾಟೀಗಾರ, ಶಂಕರ ದಹಿಂಡೆ, ಕುಮಾರ ಮಾರನಬಸರಿ, ಜಗನ್ನಾಥಸಾ ಭಾಂಡಗೆ, ಎಚ್.ಎಸ್. ಶಿವನಗೌಡ್ರ, ರಾಜು ಕುರುಡಗಿ, ರಮೇಶ ಸಜ್ಜಗಾರ, ಸಾಗರ ಪವಾರ, ವಿನಾಯಕ ಹಬೀಬ ಮುಂತಾದವರಿದ್ದರು.