ವಿಜಯಸಾಕ್ಷಿ ಸುದ್ದಿ, ರೋಣ: ದೇಶದ ಎಲ್ಲೆಡೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮ ದಿನಾಚರಣೆ ಸಂಭ್ರಮದಿಂದ ನಡೆದರೆ, ರೋಣದಲ್ಲಿ ಮಾತ್ರ ಸರ್ಕಾರಿ ಅಧಿಕಾರಿಗಳು ಮಹಾತ್ಮ ಗಾಂಧಿಯವರನ್ನೇ ಮರೆತಂತಿದೆ. ಕಾರಣ, ತಹಸೀಲ್ದಾರ್ ಕಚೇರಿಯ ಆವರಣದಲ್ಲಿರುವ ಗಾಂಧಿ ಪ್ರತಿಮೆ ಹೂಮಾಲೆಯನ್ನೂ ಕಾಣದೆ ನಿರ್ಲಕ್ಷ್ಯಕ್ಕೊಳಗಾಗಿದೆ.
ದೇಶಕ್ಕಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ, ನಾಡು-ನುಡಿ ಮತ್ತು ಕನ್ನಡದ ಏಕೀಕರಣಕ್ಕಾಗಿ ರೋಣ ತಾಲೂಕಿನ ಕೊಡುಗೆ ದೊಡ್ಡದು ಎಂಬುದು ದೇಶಕ್ಕೇ ತಿಳಿದ ಸಂಗತಿ. ಶಿಕ್ಷಣ ಪ್ರೇಮಿ ಸಂಗನಗೌಡ ಪಾಟೀಲ, ಜಕ್ಕಲಿಯ ಅಂದಾನಪ್ಪ ದೊಡ್ಡಮೇಟಿ, ಅಬ್ಬಿಗೇರಿ ವಿರೂಪಾಕ್ಷಪ್ಪನವರು ಸೇರಿದಂತೆ ಅನೇಕ ಮಹನೀಯರು ಜನ್ಮತಾಳಿದ ಪುಣ್ಯಭೂಮಿ ರೋಣ ಎಂಬುದು ತಹಸೀಲ್ದಾರರಿಗೆ, ಕಚೇರಿಯ ಸಿಬ್ಬಂದಿಗೆ ತಿಳಿದಿಲ್ಲವೇ ಎಂಬ ಪ್ರಶ್ನೆಗಳು ಮೂಡಿವೆ.
ರೋಣ ಪಟ್ಟಣದ ಸ್ವಾತಂತ್ರ್ಯ ಸೇನಾನಿ ದಿ ಗುರುಪಾದಪ್ಪ ಸಂಗಪ್ಪ ಸಂತೋಜಿಯವರು ದೇಶದ ಮತ್ತು ನಾಡಿನ ಉಳಿವಿಗಾಗಿ ನಡೆದ ಹೋರಾಟದಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡವರು. ಪಟ್ಟಣದ ಸಂತೋಜಿ ಕುಟುಂಬಸ್ಥರು ಅವರ ನೆನಪಿನಲ್ಲಿ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಗಾಂಧಿ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ. ಪ್ರತಿಮೆ ಕಚೇರಿಯ ಆವರಣದಲ್ಲಿಯೇ ಇದ್ದರೂ ಕೂಡ ಪ್ರತಿಮೆ ಹಾಗೂ ಸುತ್ತಲಿನ ಸ್ಥಳವನ್ನು ಸ್ವಚ್ಛಗೊಳಿಸದಿರುವುದು ರಾಷ್ಟ್ರಪಿತನ ಬಗ್ಗೆ ಅಧಿಕಾರಿಗಳಿಗೆ ಇಷ್ಟೇ ಗೌರವವೇ ಎಂದು ಸಂಶಯ ಮೂಡಿಸಿದೆ.
ಕಚೇರಿಯಲ್ಲಿ ಗಾಂಧಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕಚೇರಿಯ ಆವರಣದಲ್ಲೇ ಇರುವ ಪ್ರತಿಮೆಯನ್ನು ನಿರ್ಲಕ್ಷ್ಯ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸ್ವಾತಂತ್ರ ಸಂಗ್ರಾಮದಲ್ಲಿ ಅಖಂಡ ರೋಣ ತಾಲೂಕಿನ ಕೊಡುಗೆ ದೊಡ್ಡದು. ತಾಲೂಕಿನ ನೂರಾರು ಸ್ವಾತಂತ್ರ್ಯ ಸೇನಾನಿಗಳು ನಾಡು-ನುಡಿಗಾಗಿ ಶ್ರಮಿಸಿದ್ದಾರೆ. ಅವರೆಲ್ಲರ ಹೆಸರುಗಳು ಅಜರಾಮರವಾಗಿ ಉಳಿಯಬೇಕು ಎಂಬ ದೃಷ್ಟಿಯಿಂದ ತಹಸೀಲ್ದಾರ ಕಚೇರಿಯ ಆವರಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪುತ್ಥಳಿಯನ್ನು ಸ್ಥಾಪಿಸಲಾಗಿದೆ. ಅಧಿಕಾರಿಗಳು ಪ್ರತಿಮೆಯನ್ನು ಸ್ವಚ್ಛಗೊಳಿಸಿ, ಹೂಮಾಲೆಯನ್ನು ಹಾಕದಿರುವ ಸುದ್ದಿ ಕೇಳಿ ನಮ್ಮ ಮನಸ್ಸಿಗೆ ನೋವು ತಂದಿದೆ ಎಂದು ಸಂತೋಜಿ ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದರು.
ಇಡೀ ದೇಶವೇ ರಾಷ್ಟ್ರಪಿತನ ಜನ್ಮ ದಿನಾಚರಣೆಯಲ್ಲಿ ಸಡಗರದಿಂದ ಪಾಲ್ಗೊಂಡಿದೆ. ಗಾಂಧೀಜಿಯವರು ರೋಣ ತಾಲೂಕಿನ ಜಕ್ಕಲಿ ಗ್ರಾಮಕ್ಕೂ ಬಂದು ಹೋಗಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತನ ಪ್ರತಿಮೆಗೆ ಹೂ ಮಾಲೆಯನ್ನೂ ಹಾಕದಿರುವುದು ಖಂಡನೀಯ. ತಹಸೀಲ್ದಾರರೇ ಇಷ್ಟೊಂದು ನಿರ್ಲಕ್ಷ್ಯ ವಹಿಸಿದ್ದು ನಿಜಕ್ಕೂ ತಪ್ಪು. ಅಧಿಕಾರಿಗಳ ಇಂತಹ ನಡೆಯನ್ನು ಸಮಾಜ ಒಪ್ಪಲು ಸಾಧ್ಯವಿಲ್ಲ.
– ರವೀಂದ್ರನಾಥ ದೊಡ್ಡಮೇಟಿ,
ಸಾಹಿತಿಗಳು, ಪ್ರಗತಿಪರ ಚಿಂತಕರು.
“ಬೆಳಿಗ್ಗೆ ಕಚೇರಿಗೆ ಹೋಗಿ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದ್ದೇನೆ. ಆದರೆ, ಆವರಣದಲ್ಲಿರುವ ಗಾಂಧೀಜಿಯವರ ಪ್ರತಿಮೆಯ ಕಡೆ ಗಮನ ಹರಿಸಿಲ್ಲ. ಇನ್ನೊಮ್ಮೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ”
– ನಾಗರಾಜ ಕೆ.,
ತಹಸೀಲ್ದಾರರು, ರೋಣ.



