ವಿಜಯಸಾಕ್ಷಿ ಸುದ್ದಿ, ಗದಗ:: ಹಿಂದೂ ಮಹಾಗಣಪತಿ ಸುದರ್ಶನ ಚಕ್ರ ಯುವ ಮಂಡಳದ ವತಿಯಿಂದ ಸೆಪ್ಟೆಂಬರ್ 12ರಂದು ‘ಜಾಗೋ ಹಿಂದುಸ್ತಾನಿ’ ಸಂಗೀತ ಕಾರ್ಯಕ್ರಮ ಹಾಗೂ ಧರ್ಮಸಭೆ ನಡೆಯಲಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ರೀಕಾಂತ ಖಟವಟೆ ತಿಳಿಸಿದ್ದಾರೆ.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ಹಿಂದೂ ಮಹಾಗಣಪತಿ ಮಂಡಳದ ಆಶ್ರಯದಲ್ಲಿ ನಡೆಯುತ್ತಿರುವ ಗಣೇಶ ಉತ್ಸವವು ವಿಜೃಂಭಣೆಯಿಂದ ನಡೆಯುತ್ತಿದೆ. ಇತ್ತೀಚೆಗೆ ನಡೆದ ಲಕ್ಷದೀಪೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ. 21 ದಿನಗಳ ಕಾಲ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಜಿಲ್ಲೆಯಾದ್ಯಂತ ಜನರು ಆಗಮಿಸಿ ದರ್ಶನ ಪಡೆದು ಧಾರ್ಮಿಕ ಅನುಭವ ಪಡೆದಿದ್ದಾರೆ,” ಎಂದು ಹೇಳಿದರು.
ಸತತ 21 ದಿನಗಳ ಕಾಲ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಹಿಂದೂ ಮಹಾಗಣಪತಿ ಸಾರ್ವಜನಿಕ ಗಣೇಶೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಅದರ ಅಂಗವಾಗಿ ಸೆ.12ರಂದು ‘ಜಾಗೋ ಹಿಂದುಸ್ತಾನಿ’ ಸಂಗೀತ ಕಾರ್ಯಕ್ರಮ ಸೆ.14 ರಂದು ಮಹಾ ಅನ್ನಸಂತರ್ಪಣೆ, ಸೆ.15ರಂದು ಗಣೇಶನ ಆಭರಣಗಳ ಹರಾಜು, ಸೆ.16ರಂದು ವಿಜೃಂಭಿತ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸುಧೀರ್ ಕಾಟಿಗಾರ, ರವಿರಾಜ ಮಾಳಗೊಂಡ, ಕೀರ್ತಿರಾಜ ಕಾಂಬಳೆಕರ್, ಬಸವರಾಜ ಅನಗವಾಡಿ ಸೇರಿದಂತೆ ಮಂಡಳದ ಇತರ ಸದಸ್ಯರು ಉಪಸ್ಥಿತರಿದ್ದರು.
“ಗದಗ-ಬೆಟಗೇರಿ ಅವಳಿ ನಗರದಲ್ಲಿ ಮುಸ್ಲಿಂ ಸಮಾಜದ ಕೆಲ ಕಿಡಿಗೇಡಿಗಳು ಕಾರಿನ ಮೇಲೆ ಪಾಕಿಸ್ತಾನದ ಧ್ವಜ ಹಾಕಿರುವುದು ಖಂಡನೀಯ. ಈ ಅವಳಿ ನಗರ ಹಿಂದಿನಿಂದಲೂ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಹೆಸರುವಾಸಿಯಾಗಿದೆ. ಇಂತಹ ನೆಲದಲ್ಲಿ ದೇಶವಿರೋಧಿ ಕೃತ್ಯಗಳನ್ನು ಸಹಿಸುವಂತಿಲ್ಲ. ಅಂತವರಿಗೆ ಕಠಿಣ ಶಿಕ್ಷೆ ನೀಡಬೇಕು. ಮುಸ್ಲಿಂ ಸಮಾಜದ ಮುಖಂಡರು ಕೂಡ ಸಭೆ ಸೇರಿ, ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವೃತ್ತಿಯಾಗದಂತೆ ಯುವಕರಿಗೆ ಎಚ್ಚರಿಕೆ ನೀಡಬೇಕು.”
— ಶ್ರೀಕಾಂತ ಖಟವಟೆ


