ನವದೆಹಲಿ: ದೆಹಲಿಯ ಭಜನ್‌ಪುರ ಪ್ರದೇಶದಲ್ಲಿ ಆರು ವರ್ಷದ ಬಾಲಕಿಯ ಮೇಲೆ ಮೂವರು ಅಪ್ರಾಪ್ತ ಬಾಲಕರು ಸಾಮೂಹಿಕ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಜನವರಿ 18ರಂದು ಈ ಘಟನೆ ನಡೆದಿದ್ದು, ಬಳಿಕ ಬಾಲಕಿಯ ಕುಟುಂಬ ಪೊಲೀಸ್ ಠಾಣೆಗೆ ದೂರು ನೀಡಿದೆ. ಪೊಲೀಸರ ಮಾಹಿತಿ ಪ್ರಕಾರ, ಮೂವರು ಬಾಲಕರು ಬಾಲಕಿಯನ್ನು ಆಮಿಷವೊಡ್ಡಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮೂರನೇ ಆರೋಪಿ ಪರಾರಿಯಾಗಿದ್ದಾನೆ. ಪರಾರಿಯಾದ ಆರೋಪಿಯ ಕುಟುಂಬವೂ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಬಂಧಿತ ಇಬ್ಬರನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ.
ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅಗತ್ಯ ಚಿಕಿತ್ಸೆಯ ಜೊತೆಗೆ ಸಮಾಲೋಚನೆ ವ್ಯವಸ್ಥೆ ಮಾಡಲಾಗಿದೆ. ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ. ಮೂರನೇ ಆರೋಪಿಯನ್ನು ಪತ್ತೆಹಚ್ಚಲು ವಿಶೇಷ ಶೋಧ ತಂಡ ರಚಿಸಲಾಗಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಶೀಘ್ರದಲ್ಲೇ ಪರಾರಿಯಾದ ಆರೋಪಿಯನ್ನು ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರದ ವಿರುದ್ಧ ಕಠಿಣ ಕಾನೂನುಗಳಿದ್ದರೂ, ಇಂತಹ ಘಟನೆಗಳು ಮರುಮರು ನಡೆಯುತ್ತಿರುವುದು ಗಂಭೀರ ಚಿಂತೆಗೆ ಕಾರಣವಾಗಿದೆ.



