ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಂಡರ ಹಾವಳಿ ಎಲ್ಲೆ ಮೀರಿದ್ದು, ಇವರು ಪೊಲೀಸರ ಮೇಲೆ ಭಯವೇ ಇಲ್ಲದಂತೆ ವರ್ತಿಸುತ್ತಿದ್ದಾರೆ.
ಅದರಂತೆ ತಡರಾತ್ರಿ ನಗರದ ಬ್ಯಾಡರಹಳ್ಳಿ ಹಾಗೂ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪುಂಡರು ಅಟ್ಟಹಾಸ ತೋರಿದ್ದಾರೆ. ಬ್ಯಾಡರಹಳ್ಳಿ ವ್ಯಾಪ್ತಿಯ ವಾಲ್ಮೀಕಿ ನಗರ ಹಾಗೂ ಅನ್ನಪೂರ್ಣೇಶ್ವರಿ ಠಾಣಾ ವ್ಯಾಪ್ತಿಯ ಮುದ್ದಯ್ಯನಪಾಳ್ಯ ಬಳಿ ರಸ್ತೆ ಬದಿ ಪಾರ್ಕ್ ಮಾಡಿದ್ದ ಸುಮಾರು 25 ಕ್ಕೂ ಹೆಚ್ಚು ವಾಹನಗಳನ್ನ ಪುಡಿರೌಡಿಗಳು ಪೀಸ್ ಪೀಸ್ ಮಾಡಿದ್ದಾರೆ.
ಲಾಂಗು ಮಚ್ಚು ಹಿಡಿದು ಏರಿಯಾಗೆ ಎಂಟ್ರಿ ಕೊಟ್ಟ ನಾಲ್ಕೈದು ಪುಂಡರ ಗುಂಪು ನಶೆಯಲ್ಲಿ ರಸ್ತೆ ಬದಿ ನಿಂತಿದ್ದ ಎಲ್ಲಾ ವಾಹನಗಳ ಗ್ಲಾಸ್ ಒಡೆದು ಪುಂಡಾಟ ತೋರಿದ್ದಾರೆ. ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ವಾಲ್ಮೀಕಿನಗರದಲ್ಲಿ 20ಕ್ಕೂ ಹೆಚ್ಚು ವಾಹನಗಳನ್ನ ಜಖಂ ಗೊಳಿಸಿದ್ರೆ, ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಟಿಟಿ ಸೇರಿ ಐದಾರು ವಾಹನಗಳನ್ನ ಪುಂಡರು ಜಖಂಗೊಳಿಸಿದ್ದಾರೆ. ಮುಂಜಾನೆ ಎದ್ದು ತಮ್ಮ-ತಮ್ಮ ವಾಹನ ನೋಡಿದ ಮಾಲೀಕರು, ತಮ್ಮ ವಾಹನದ ಸ್ಥಿತಿ ಕಂಡು ಕಣ್ಣೀರಿಟ್ಟಿದ್ದಾರೆ. ಇನ್ನೂ ಘಟನಾ ಸ್ಥಳಕ್ಕೆ ಬ್ಯಾಡರಹಳ್ಳಿ ಪೊಲೀಸರು ಹಾಗೂ ಅನ್ನಪೂರ್ಣೇಶ್ವರಿನಗರ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.