ಕುಸಿತ ಕಂಡ ಬೆಳ್ಳುಳ್ಳಿ ದರ | ಎಪಿಎಂಸಿ ಯಾರ್ಡ್‌ನಲ್ಲಿ ರೈತರ ಅಸಮಾಧಾನ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷೇಮೇಶ್ವರ: ಪಟ್ಟಣದ ಎಪಿಎಂಸಿ ಯಾರ್ಡ್ ಮಾರುಕಟ್ಟೆಯಲ್ಲಿ ಶನಿವಾರ ಬೆಳ್ಳುಳ್ಳಿ ದರ ತೀವ್ರ ಕುಸಿದ ಹಿನ್ನೆಲೆಯಲ್ಲಿ ಅಕ್ರೋಶಗೊಂಡ ರೈತರು ಮಾರುಕಟ್ಟೆಯ ರಸ್ತೆಯ ಮಧ್ಯೆ ಬೆಳ್ಳುಳ್ಳಿ ಸುರಿದು ಪ್ರತಿಭಟನೆ ನಡೆಸಿದರು.

Advertisement

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶನಿವಾರ ಎಂದಿನಂತೆ ರೈತರು ತಾವು ಬೆಳೆದಿದ್ದ ಬೆಳ್ಳುಳ್ಳಿ ಮಾರುಕಟ್ಟೆಗೆ ತಂದಿದ್ದು, ಕಳೆದ ವಾರಕ್ಕಿಂತಲೂ ದರ ಕುಸಿದಿದ್ದರಿಂದ, ಅಕ್ರೋಶಗೊಂಡ ರೈತರು ಬೆಳ್ಳುಳ್ಳಿಯನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ಬಾರಿ ಮಳೆಯ ಹೊಡೆತಕ್ಕೆ ನಲುಗಿರುವ ಬೆಳ್ಳುಳ್ಳಿ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಈಗ ಅಳಿದುಳಿದ ಬೆಳೆಗೂ ಬೆಲೆ ಇಲ್ಲದಂತಾಗಿದ್ದು, ಇದು ರೈತರ ಅಕ್ರೋಶಕ್ಕೆ ಕಾರಣವಾಗಿದೆ.

ಅತಿಯಾದ ಮಳೆಯ ಹಿನ್ನೆಲೆ ಬೆಳ್ಳುಳ್ಳಿಯ ಗುಣಮಟ್ಟ ಕಡಿಮೆಯಾಗಿದೆ ಎನ್ನುವ ದೃಷ್ಟಿಯಿಂದ ಖರೀದಿಗೆ ವ್ಯಾಪಾರಸ್ಥರು ಬಾರದೇ ಇರುವುದರಿಂದ ಬೆಲೆ ಸಿಗುತ್ತಿಲ್ಲ ಎನ್ನಲಾಗುತ್ತಿದೆ. ಅಲ್ಲದೆ ದಲ್ಲಾಳಿಗಳು ಸಹ ಬೆಳೆ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಕಳೆದ ವಾರ ಬೆಳ್ಳುಳ್ಳಿ ದರ ಕ್ವಿಂಟಾಲ್‌ಗೆ 5000-7000 ರೂ.ಗಳ ಧಾರಣೆ ಕಂಡಿದ್ದು, ಈ ವಾರ 3000-4000 ರೂ.ಗಳಿಗೆ ಕುಸಿತ ಕಂಡಿದ್ದು ಅಕ್ರೋಶಗೊಂಡ ರೈತರು ಬೆಳ್ಳುಳ್ಳಿ ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದ್ದಾರೆ. ರೈತರ ಗೋಳಿಗೆ ಯಾರೂ ಸ್ಪಂದಿಸುತ್ತಿಲ್ಲ ಎಂದು ವ್ಯವಸ್ಥೆಯ ವಿರುದ್ಧ ಧಿಕ್ಕಾರ ಕೂಗಿದರು.
ಗದಗ, ಬಾಗಲಕೋಟೆ, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಬೆಳ್ಳುಳ್ಳಿಗೆ ಹೆಚ್ಚಿನ ಬೆಲೆ ನಿಗದಿಪಡಿಸಲಾಗಿದೆ. ಇಲ್ಲಿ ಮಾತ್ರ ಕಡಿಮೆ ದರವೇಕೆ ಎಂದು ರೈತ ಶಿವು ಕಡೆಮನಿ ಪ್ರಶ್ನಿಸಿದರು. ಕಳೆದ ವಾರ ಬೆಳ್ಳುಳ್ಳಿ ದರ ಸಮಾಧಾನಕರವಾಗಿತ್ತು. ಈಗ ಬೆಳ್ಳುಳ್ಳಿ ದರ ಇಳಿಸಲಾಗಿದೆ. ರೈತರಿಗೆ ನ್ಯಾಯ ಒದಗಿಸದಿದ್ದರೆ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ರೈತರಾದ ಮಂಜುನಾಥ ಬೆಟಗೇರಿ, ಬಸವರಾಜ ಯಂಗಾಡಿ ಮತ್ತು ಪರಸುರಾಮ ಲಕ್ಕಣ್ಣವರ ಎಚ್ಚರಿಸಿದರು.
ಈಗಾಗಲೇ ರೈತರು ಮಳೆಯ ಹೊಡೆತಕ್ಕೆ ಕಂಗಾಲಾಗಿದ್ದಾರೆ. ಹೆಸರು ಬೆಳೆ, ಹೇಳ ಹೆಸರಿಲ್ಲದಂತಾಗಿ ರೈತರಿಗೆ ಗಾಯ ಮಾಡಿತು. ಅಲ್ಲದೆ ಬೆಳ್ಳುಳ್ಳಿ ಬೆಳೆ ಶೇ. 80ರಷ್ಟು ಹಾಳಾಗಿದೆ. ಉಳಿದ ಶೇ. 10-20ರಷ್ಟು ಇರುವ ಬೆಳೆಗೂ ಸಹ ಬೆಲೆ ಇಲ್ಲದಿದ್ದರೆ ರೈತರು ಬದುಕುವುದಾದರೂ ಹೇಗೆ? ಬೆಲೆ ಕಡಿಮೆಯಾಗಿದ್ದರೂ ಅತಿ ಕನಿಷ್ಠ ದರಕ್ಕೆ ಮಾರಾಟ ಮಾಡುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ರೈತರಾದ ಶ್ರೀನಾಥ ಗೋಂದಿ, ಪರಶುರಾಮ ಲಕ್ಕಣ್ಣವರ ಹೇಳಿದರು.
ರೈತರಾದ ರಮೇಶ ಪೂಜಾರ, ಸಾದೇವಪ್ಪ ಜುಲ್ಪಿ, ಬಸವರಾಜ ಬೆಳವಣಿಕಿ, ಶಿವಾನಂದ ಗುಮ್ಮಗೋಳ, ನಿಂಗರಾಜ ಬಿಜಗತ್ತಿ, ಆದಿತ್ಯ ಹದ್ದಣ್ಣವರ, ಹನುಮಂತ ಪೂಜಾರ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.

ವಿಷಯ ತಿಳಿಯುತ್ತಿದ್ದಂತೆ ಎಪಿಎಂಸಿ ಕಾರ್ಯದರ್ಶಿ ರುದ್ರಗೌಡ ಪಾಟೀಲ್ ಸ್ಥಳಕ್ಕೆ ಧಾವಿಸಿ, ಮೊದಲು ರೈತರು ತಂದ ಮಾಲನ್ನು ಇಳಿಸಿಕೊಳ್ಳಿ ಎಂದು ದಲ್ಲಾಳಿಗಳಿಗೆ ಸೂಚಿಸಿದರು. ಈ ವೇಳೆ ಕೆಲ ಸಮಯ ರೈತರ ಮತ್ತು ದಲ್ಲಾಳಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಗದ್ದಲದ ವಾತಾವರಣ ತಿಳಿಯಾಗುತ್ತಿರುತ್ತಂತೆ ಮತ್ತೆ ಹರಾಜು ಪ್ರಕ್ರಿಯೆ ಪ್ರಾರಂಭವಾಯಿತು.

 


Spread the love

LEAVE A REPLY

Please enter your comment!
Please enter your name here