ಜೈಪುರ:ರಾಜಸ್ಥಾನದ ಬಿಕಾನೆರ್ ಜಿಲ್ಲೆಯ ಅಂಗಡಿಯೊಂದರಲ್ಲಿ ಸಂಭವಿಸಿದ ಭಾರಿ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
Advertisement
ಬಿಕಾನೆರ್ ನಗರದ ಜನನಿಬಿಡ ಕೊಟ್ವಾಲಿ ಪೊಲೀಸ್ ಠಾಣೆ ಪ್ರದೇಶದಲ್ಲಿರುವ ಮದನ್ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದೆ. ಸ್ಫೋಟದಿಂದ ಅಂಗಡಿ ಇದ್ದ ಕಟ್ಟಡ ಕುಸಿದು ಬಿದ್ದಿದೆ. ಚಿನ್ನ ಮತ್ತು ಬೆಳ್ಳಿಗೆ ಸಂಬಂಧಿಸಿದ ಕೆಲಸ ನಡೆಯುತ್ತಿದ್ದ ಅಂಗಡಿಯಲ್ಲಿ ಈ ಘಟನೆ ಸಂಭವಿಸಿದೆ.
ಇಲ್ಲಿಯವರೆಗೆ 9 ಜನರು ಸಾವನ್ನಪ್ಪಿದ್ದಾರೆ ಎಂದು ಎಎಸ್ಪಿ ವಿಶಾಲ್ ಜಂಗಿಡ್ ಮಾಹಿತಿ ನೀಡಿದ್ದಾರೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ನಾಗರಿಕ ರಕ್ಷಣಾ ಮತ್ತು ಪೊಲೀಸರ ಜಂಟಿ ತಂಡ ಕಟ್ಟಡದ ಅಡಿಯಿಂದ ಐದು ಮೃತದೇಹಗಳನ್ನು ಹೊರತೆಗೆದಿದೆ. ಘಟನೆ ಕುರಿತು ತನಿಖೆ ಮುಂದುವರಿದಿದೆ.